ಏಕದಿನ ವಿಶ್ವಕಪ್‌ಗೆ ಮುನ್ನ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನಡೆಯುವ ಪಾಕಿಸ್ತಾನ ತಂಡದ ಮೊದಲ ಅಭ್ಯಾಸ ಕ್ರಿಕೆಟ್ ಪಂದ್ಯಕ್ಕೆ ಭದ್ರತಾ ಕಾರಣಗಳಿಗಾಗಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಸ್ಥಳೀಯ ಭದ್ರತಾ ಸಂಸ್ಥೆಗಳ ಸಲಹೆಯಂತೆ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದೊಳಗೆ ಅಭಿಮಾನಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
“ಹೈದರಾಬಾದ್‌ನಲ್ಲಿನ ಪಂದ್ಯದ ದಿನವು ಹಬ್ಬಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ನಗರದ ಸುತ್ತಲೂ ದೊಡ್ಡ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಹಣವನ್ನು ಮರುಪಾವತಿ ಮಾಡಲಾಗುತ್ತದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಜೊತೆಗಿನ ಮೈತ್ರಿ ಕೊನೆಗೊಳಿಸಿದ ಎಐಎಡಿಎಂಕೆ: ಪಟಾಕಿ ಹಚ್ಚಿ ಸಂಭ್ರಮಿಸಿದ ಕಾರ್ಯಕರ್ತರು
ಭಾರತಕ್ಕೆ ಪಾಕಿಸ್ತಾನ ತಂಡ ಪ್ರಯಾಣಿಸುವ 48 ಗಂಟೆಗಳ ಒಳಗೆ ವೀಸಾ ಕ್ಲಿಯರೆನ್ಸ್ ನೀಡಲಾಗುತ್ತದೆ. ಪಾಕಿಸ್ತಾನ ತಂಡವು ಸೆಪ್ಟೆಂಬರ್ 27ರ ಮುಂಜಾನೆ ಭಾರತಕ್ಕೆ ಪ್ರಯಾಣಿಸಲಿದೆ. ತಂಡವು ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ಆಡುತ್ತದೆ” ಎಂದು ಐಸಿಸಿ ವಕ್ತಾರರು ಮಾಹಿತಿ ನೀಡಿದ್ದಾರೆ.
ವೀಸಾ ಮಂಜೂರಾತಿ ವಿಚಾರದಲ್ಲಿ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯಲ್ಲಿ ಗೊಂದಲ ಮನೆಮಾಡಿತ್ತು. ವೀಸಾ ಕ್ಲಿಯರೆನ್ಸ್ ಕುರಿತು ನಮಗೆ ಇನ್ನೂ ಭಾರತೀಯ ರಾಯಭಾರ ಕಚೇರಿಯಿಂದ ಕರೆ ಬಂದಿಲ್ಲಎಂದು ಪಿಸಿಬಿ ವಕ್ತಾರ ಉಮರ್ ಫಾರೂಕ್ ತಿಳಿಸಿದ್ದರು.
ವೀಸಾ ವಿಳಂಬದ ಬಗ್ಗೆ ಪಿಸಿಬಿ ಸೋಮವಾರ ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್‌ಗೆ ಪತ್ರ ಬರೆದ ನಂತರ ಐಸಿಸಿಯಿಂದ ದೃಢೀಕರಣ ನೀಡಲಾಗಿದೆ.
ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡ ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯವನ್ನು ಆಡಲಿದೆ ಮತ್ತು ಮೂರು ದಿನಗಳ ನಂತರ ಅ.6ರಂದು ನೆದರ್‌ಲ್ಯಾಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವಾಡಲಿದೆ.