ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದೆ. ಮೊದಲ ದಿನವಾದ ಶುಕ್ರವಾರ ಭಾರತ ತಂಡ 85 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿ ಪ್ರಾಬಲ್ಯ ಮೆರೆಯಿತು.
ಭಾರತದ ಪರ ಇಬ್ಬರು ಬ್ಯಾಟರ್ ಗಳು ಶತಕ ಸಿಡಿಸಿದರೆ, ಓರ್ವ ಬ್ಯಾಟರ್ ಅರ್ಧಶತಕ ಸಿಡಿಸಿದ್ದಾರೆ. ಈ ನಡುವೆ ದಿನದಾಟ ಮುಕ್ತಾಯದ ಬಳಿಕ ಡ್ರೆಸಿಂಗ್ ರೂಮ್ಗೆ ಬಂದ ರಿಷಬ್ ಪಂತ್ ರನ್ನು ತಂಡದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಕೈಮುಗಿದು ಸ್ವಾಗತಿಸಿದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಭಾರತದ ಪರ ಯಶಸ್ವಿ ಜೈಸಾಲ್ ಮತ್ತು ನಾಯಕ ಶುಭ್ ಮನ್ ಗಿಲ್ ಶತಕ ಸಿಡಿಸಿದರೆ, ರಿಷಬ್ ಪಂತ್ ಅಜೇಯ 65 ರನ್ ಗಳಿಸಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಗಿಲ್ ಅವರು ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ ‘ಆಯ್ದ ಆಟಗಾರರ’ ಕ್ಲಬ್ಗೆ ಸೇರಿದರು.
ಈ ಹಿಂದೆ ವಿಜಯ್ ಹಜಾರೆ (164*), ಸುನಿಲ್ ಗಾವಸ್ಕರ್ (116), ದಿಲೀಪ್ ವೆಂಗಸರ್ಕರ್ (102) ಮತ್ತು ವಿರಾಟ್ ಕೊಹ್ಲಿ (141) ಅವರೂ ನಾಯಕರಾಗಿ ಮೊದಲ ಟೆಸ್ಟ್ ನಲ್ಲೇ ಶತಕ ಬಾರಿಸಿದ್ದರು.
ಪದಾರ್ಪಣೆ ಪಂದ್ಯ ಆಡಿದ ಸಾಯಿ ಸುದರ್ಶನ್ ಕೇವಲ ನಾಲ್ಕು ಎಸೆತ ಎದುರಿಸಿದರು. ಆದರೆ ಅವರಿಗೆ ಖಾತೆ ತೆರೆಯಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬಿಡಲಿಲ್ಲ. ಜೇಮಿ ಸ್ಮಿತ್ ಪಡೆದ ಚೆಂದದ ಕ್ಯಾಚ್ಗೆ ಸಾಯಿ ನಿರ್ಗಮಿಸಿದರು.
ಪಂದ್ಯದ ಎರಡನೇ ದಿನದಂದು ಭಾರತ ತಂಡ ಬ್ಯಾಟಿಂಗ್ ಮಾಡಲು ಬಂದಾಗ, ಸ್ಕೋರ್ ಅನ್ನು 500 ರನ್ಗಳಿಗಿಂತ ಹೆಚ್ಚು ಗಳಿಸಲು ಪ್ರಯತ್ನಿಸುತ್ತದೆ. ಟೀಮ್ ಇಂಡಿಯಾ 500 ರನ್ ಗಳಿಸಿದರೆ, ಇಂಗ್ಲೆಂಡ್ ಮೇಲೆ ಹೆಚ್ಚುವರಿ ಒತ್ತಡ ಹೇರಲಾಗುತ್ತದೆ. ಇಂದಿನ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.