ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ತೀವ್ರ ಕುತೂಹಲದ ಹಂತ ತಲುಪಿದೆ. ಎರಡನೇ ಇನಿಂಗ್ಸ್‌ನಲ್ಲಿ 608 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಇಂಗ್ಲೆಂಡ್ ತಂಡ 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, ಕೊನೆಯ ದಿನ 536 ರನ್ ಗಳಿಸಬೇಕಿದೆ. ಭಾರತ ಗೆಲುವು ಸಾಧಿಸಲು 7 ಆಂಗ್ಲ ಪಡೆಯ 7 ವಿಕೆಟ್‌ಗಳನ್ನು ಕಬಳಿಸಬೇಕಿದೆ. ಆದರೆ, ಹವಾಮಾನ ವೈಪರಿತ್ಯ ಭಾರತದ ಗೆಲುವಿಗೆ ಅಡ್ಡಿ ಆಗಬಹುದೆಂಬ ಆತಂಕ ಎದುರಾಗಿದೆ.
ಪಂದ್ಯ ಆರಂಭವಾಗುವ ಮುನ್ನವೇ ಮಳೆ ಶುರುವಾದ ಕಾರಣ 5ನೇ ಹಾಗೂ ಕೊನೆಯ ದಿನದ ಮೊದಲ ಆವೃತ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಿಚ್‌ನ ಮೇಲೆ ಹೊದಿಕೆಯನ್ನ ಹಾಸಿ 30 ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ರ ನಂತರ ಅಂಪೈರ್‌ಗಳು ಮೈದಾನವನ್ನು ಪರಿಶೀಲಿಸಿ ಮುಂದಿನ ನಿರ್ಧರಿಸಲಿದ್ದಾರೆ.
ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್ | ದ್ವಿಶತಕ ಬಾರಿಸಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್
ಭಾರತದ ಮೊದಲ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಅವರ ಭರ್ಜರಿ ದ್ವಿಶತಕದ ನೆರವಿನಿಂದ 587 ರನ್ ಗಳಿಸಲಾಯಿತು. ಬಳಿಕ ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ 427/6 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್‌ಗೆ 608 ರನ್‌ಗಳ ಗುರಿಯನ್ನು ನೀಡಿತ್ತು. ನಾಲ್ಕನೇ ದಿನದ ಅಂತ್ಯದ ವೇಳೆಗೆ ಇಂಗ್ಲೆಂಡ್ 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, ಪಂದ್ಯ ಭಾರತದ ಹಿಡಿತದಲ್ಲಿದೆ. ಆದರೆ ಮಳೆ ಬಂದಿರುವುದರಿಂದ ಪಂದ್ಯ ಆಂಗ್ಲರ ಪರ ವಾಲುವಂತೆ ಕಾಣುತ್ತಿದೆ.
ಸ್ಥಳೀಯ ಹವಾಮಾನದ ಪ್ರಕಾರ ಇಂಗ್ಲೆಂಡ್‌ನ ಕಾಲಮಾನದಲ್ಲಿ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಮಳೆಯ ಸಾಧ್ಯತೆ ಶೇ. 90ರಷ್ಟಿದೆ. ಪಂದ್ಯ ಆರಂಭವು ಮಧ್ಯಾಹ್ನದವರೆಗೆ ವಿಳಂಬವಾಗಬಹುದು. ಆದರೆ, ಮಧ್ಯಾಹ್ನ 2 ಗಂಟೆ ನಂತರ ಮಳೆಯ ಪ್ರಮಾಣ ಕೇವಲ ಶೇ. 20 ರಷ್ಟು ಇರುತ್ತದೆ.ಸಂಜೆ 4 ರಿಂದ 5ರವರೆಗೆ ಮಳೆಯ ಯಾವುದೇ ಲಕ್ಷಣಗಳಿಲ್ಲ. ಮೋಡ ಮುಸುಕಿದ ವಾತಾವರಣ ಮತ್ತು ತಂಪಾದ ಹವಾಮಾನವು ಬೌಲಿಂಗ್‌ಗೆ ಅನುಕೂಲವಾಗಬಹುದು. ಆದರೆ ಪಂದ್ಯವು ಮಳೆ ನಿಲ್ಲುವುದರ ಮೇಲೆ ಅವಲಂಬಿತವಾಗಿದೆ.