ಮುಂದಿನ ವರ್ಷ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಎರಡು ವಿಭಿನ್ನ ದೇಶಗಳಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದು ಅಸಂಭವವಾಗಿರುವುದರಿಂದ ಹೈಬ್ರಿಡ್ ಮಾದರಿಯಲ್ಲಿ ಸರಣಿ ನಡೆಯುವ ಸಾಧ್ಯತೆಯಿದೆ.
ಪಾಕಿಸ್ತಾನವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾದ 1998ರ ನಂತರದಿಂದ ಇದೇ ಮೊದಲ ಬಾರಿಗೆ 2025ರಲ್ಲಿ ಆಯೋಜಿಸುವ ಹಕ್ಕುಗಳನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಕೆಲವು ಪಂದ್ಯಗಳು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳೆದ ತಿಂಗಳು ವೇಳಾಪಟ್ಟಿಯ ಕರಡನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿತ್ತು. ವೇಳಾಪಟ್ಟಿಯ ಪ್ರಕಾರ ಭಾರತದ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ. ಆದಾಗ್ಯೂ ಇಲ್ಲಿಯವರೆಗೂ ಬಿಸಿಸಿಐನಿಂದ ಪ್ರವಾಸ ಕೈಗೊಳ್ಳುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಕೈಗೊಳ್ಳುವುದು ಅತ್ಯಂತ ಅಸಂಭವವಾಗಿದೆ. ಅಂತಿಮವಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಹೈಬ್ರಿಡ್ ಮಾದರಿ ರೂಪಿಸಲಾಗುತ್ತದೆ.ಭಾರತವು ತನ್ನ ಪಂದ್ಯಗಳನ್ನು ಏಷ್ಯಾ ಕಪ್ ರೀತಿ ಯುಎಇ ಅಥವಾ ಶ್ರೀಲಂಕಾದಲ್ಲಿ ಅಡಬಹುದು. ಐಸಿಸಿ ತನ್ನ ನಿಲುವನ್ನು ಹೊಂದಿದ್ದರೂ, ನಾವು ಈ ರೀತಿ ಯೋಚಿಸುತ್ತಿದ್ದೇವೆ. ಮುಂದೆ ಹೇಗಾಗುತ್ತದೆ ಎಂಬುದನ್ನು ನೋಡೋಣ. ಈಗಿರುವ ಸಂದರ್ಭಕ್ಕೆ ತಕ್ಕಂತೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಡಬಹುದು ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ
ಭಾರತದಿಂದ ಈ ಬೆಳವಣಿಗೆ ನಡೆದ ನಂತರ ಪಿಸಿಬಿ ಅಧ್ಯಕ್ಷ ಮೋಸಿನ್ ನಖ್ವಿ ಸಂಪೂರ್ಣ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಶ್ರಮವಹಿಸುತ್ತಿದ್ದಾರೆ. ಜುಲೈ ನಂತರದಲ್ಲಿ ಕೊಲೊಂಬೊದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.
ಭಾರತವು 2012-13ರ ನಂತರ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಿಲ್ಲ. 2008ರಿಂದ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸವನ್ನು ಕೂಡ ಕೈಗೊಂಡಿಲ್ಲ. ಗಡಿಯಾಚೆಯ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಪಾಕ್ ಜೊತೆ ಕ್ರಿಕೆಟ್ ಆಡುವುದಿಲ್ಲ ಎಂದು ಕಳೆದ ವರ್ಷ ಕೇಂದ್ರ ಕ್ರೀಡಾ ಮಂತ್ರಿಯಾಗಿದ್ದ ಅನುರಾಗ್ ಠಾಕೂರ್ ಹೇಳಿದ್ದರು.
ಕಳೆದ ವರ್ಷ ಕೂಡ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದ ಕಾರಣ ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿ ಆಯೋಜಿಸಲಾಗಿತ್ತು. ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿಜೇತ ತಂಡವಾಗಿತ್ತು.