ಐಸಿಸಿ ಚಾಂಪಿಯನ್ಸ್ ಟ್ರೋಫಿ ಇನ್ನೇನು ಪ್ರಮುಖ ಘಟ್ಟ ತಲುಪಲಿದೆ. ಇಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ಮಧ್ಯಾಹ್ನ 2.30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈವರೆಗೆ ಭಾರತ ಮತ್ತು ಆಸೀಸ್ ನಡುವೆ 4 ಪಂದ್ಯಗಳು ನಡೆದಿದ್ದು, 2 ರಲ್ಲಿ ಭಾರತ, 1ರಲ್ಲಿ ಆಸ್ಟ್ರೇಲಿಯಾ ಗೆದ್ದರೆ, 2009ರಲ್ಲಿ ಒಂದು ಪಂದ್ಯ ಮಳೆಗೆ ಬಲಿಯಾಗಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲಿಯೇ ಈ ಪಂದ್ಯ ನಡೆಯಲಿದೆ. ಇನ್ನೂ ದುಬೈನ ಯಾವುದೇ ಅಂಗಳದಲ್ಲಿ ಪಂದ್ಯ ನಡೆದರೂ, ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳುತ್ತದೆ. ಹೀಗಾಗಿ ಸ್ಪಿನ್ ಮಾಂತ್ರಿಕರು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸುವ ಸಾಧ್ಯತೆಯಿದೆ. ವರುಣ್ ಚಕ್ರವರ್ತಿ ಜೊತೆಗೆ ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ವೇಗಿ ಮೊಹಮ್ಮದ್ ಶಮಿ ಜೊತೆಗೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್‌ನಲ್ಲಿ ಜೊತೆಯಾಗಲಿದ್ದಾರೆ.
ಇಬ್ಬನಿಯ ಸಮಸ್ಯೆ ಇಲ್ಲದಿರುವ ಕಾರಣ, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು. 270-280 ರನ್ ಗಳಿಸಿದರೆ ಗೆಲುವು ಸುಲಭವಾಗುವುದು. ಆದರೆ ಸದ್ಯ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿದರೆ 300 ರನ್ ಅಥವಾ ಮೊದಲು ಬೌಲಿಂಗ್ ಮಾಡಿದರೆ ಆಸೀಸ್ ತಂಡವನ್ನು 250 ರನ್‌ಗಳಿಗೆ ಕಟ್ಟಿಹಾಕುವ ಯೋಚನೆಯಲ್ಲಿದೆ. ಸದ್ಯ ಸತತ 13 ಬಾರಿ ಟಾಸ್ ಸೋತಿರುವ ಟೀಂ ಇಂಡಿಯಾ ಈ ಬಾರಿಯಾದರೂ ಟಾಸ್ ಗೆಲ್ಲುತ್ತದೆಯೆ ಎಂಬುದನ್ನು ಕಾದುನೋಡಬೇಕಿದೆ.
ಈ ಸುದ್ದಿ ಓದಿದ್ದೀರಾ? 1800 ಕೋಟಿ ಖರ್ಚು ಮಾಡಿ ಕೇವಲ 16 ಗಂಟೆ ಆಟವಾಡಿದ ಪಾಕಿಸ್ತಾನ ತಂಡ
ಟೀಂ ಇಂಡಿಯಾ ಬ್ಯಾಟರ್‌ಗಳು ಫಾರ್ಮ್‌ನಲ್ಲಿ ಇರುವುದರಿಂದ ಆಸೀಸ್ ವಿರುದ್ಧ ಹೆಚ್ಚು ರನ್ ಕಲೆ ಹಾಕುವ ಸಾಧ್ಯತೆಯಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಶುಭಮನ್ ಗಿಲ್, ಆರಂಭದಲ್ಲಿ ಬಿಗ್ ಇನಿಂಗ್ಸ್ ಕಟ್ಟಬೇಕಿದೆ. 3ನೇ ಕ್ರಮಾಂಕದಲ್ಲಿ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದರೆ, ಕನ್ನಡಿಗ ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್‌ಗಳಾಗಿ ಕಣಕ್ಕಿಳಿಯಲು ಕಾದುಕುಳಿತಿದ್ದಾರೆ.
ಟೀಂ ಇಂಡಿಯಾದಂತೆ ಆಸ್ಟ್ರೇಲಿಯಾ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಅದರಲ್ಲೂ ಐಸಿಸಿ ಟ್ರೋಫಿ ಟೂರ್ನಿಗಳಾದರೆ, ಕಾಂಗರೂಗಳು ಎದುರಾಳಿ ತಂಡಗಳ ವಿರುದ್ಧ ಬಲಿಷ್ಠವಾಗಿ ಸೆಣಸುತ್ತವೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತೆ ಕಾಡುತ್ತಾರಾ? ಅಥವಾ ಶಮಿ ಸಾರಥ್ಯ ಬೌಲಿಂಗ್ ಪಡೆ ಬಹುಬೇಗನೆ ವಿಕೆಟ್ ಪಡೆದು ಪೆವಿಲಿಯನ್‌ಗಟ್ಟುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರು
ಭಾರತ:
ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ:
ಸ್ಟೀವ್ ಸ್ಮಿತ್ (ನಾಯಕ), ಜೇಕ್ ಫ್ರೇಸರ್ ಮೆಕ್‌ಗುರ್ಕ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಆ್ಯಡಂ ಝಂಪಾ, ಶಾನ್ ಅಬಾಟ್, ಅಲೆಕ್ಸ್ ಕ್ಯಾರಿ , ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕೂಪರ್ ಕೊನೊಲಿ.
