ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್ ಆಗಿದೆ. ಈ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಮತ್ತೆ ವಿಫಲರಾದರು.
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಜಸ್ಪ್ರಿತ್ ಬುಮ್ರಾ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟೀಮ್ ಇಂಡಿಯಾಗೆ ಇದು ಮಹತ್ವದ ಪಂದ್ಯವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಆದರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ.
ಯಶಸ್ವಿ ಜೈಸ್ವಾಲ್ (10), ಕೆ ಎಲ್ ರಾಹುಲ್ (4) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ಟೆಸ್ಟ್‌ನಲ್ಲಿ ತಂಡದಿಂದ ಹೊರಗುಳಿದಿದ್ದ ಶುಭಮನ್ ಗಿಲ್, ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದರು. ಆದರೆ ಇವರು ಸಹ 20 ರನ್‌ಗಳ ಮೇಲೆ ದೊಡ್ಡ ಕಾಣಿಕೆ ನೀಡಲಿಲ್ಲ. ಹಳೆಯ ದಾಟಿಯಲ್ಲಿ ಔಟ್ ಆದ ವಿರಾಟ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಸೂಚನೆ ನೀಡಿದ್ದರು. ಆದರೆ 17 ರನ್‌ಗಳಿಸಿ ಔಟಾದರು.
ಈ ಸುದ್ದಿ ಓದಿದ್ದೀರಾ? ನಾಲ್ಕನೇ ಟೆಸ್ಟ್ | ಕೈಕೊಟ್ಟ ಬ್ಯಾಟಿಂಗ್: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ ಹೀನಾಯ ಸೋಲು
48 ರನ್‌ಗಳ ಜೊತೆಯಾಟ 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಜೋಡಿ ಕೊಂಚ ಆಸರೆ ಆಯಿತು. ಇವರಿಬ್ಬರ ಜೋಡಿ 151 ಎಸೆತಗಳನ್ನು ಎದುರಿಸಿ 48 ರನ್‌ಗಳ ಪೇರಿಸಿತು. ರಿಷಭ್ ಪಂತ್ 98 ಎಸೆತಗಳಲ್ಲಿ 40 ರನ್ ಬಾರಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ 95 ಎಸೆತಗಳಲ್ಲಿ 26 ರನ್ ಸಿಡಿಸಿದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 14, ಜಸ್ಪ್ರಿತ್ ಬುಮ್ರಾ 22 ರನ್ ಬಾರಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಆಸ್ಟ್ರೇಲಿಯಾದ ಪರ ವೇಗದ ಬೌಲರ್‌ಗಳು ಬಿಗುವಿನ ದಾಳಿಯನ್ನು ನಡೆಸಿದರು. ಸ್ಕಾಟ್ ಬೋಲೆಂಡ್ 31 ರನ್ ನೀಡಿ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು, ಲಿಯೋನ್ 1 ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಆಸೀಸ್ ಆರಂಭಿಕ ಪತನ ಕಂಡಿದ್ದು 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.
