ಭಾರತ ಹಾಗೂ ನೇಪಾಳ ತಂಡಗಳ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಕದನಕ್ಕೆ ಕ್ಷಣಗಣನೆ ಆರಂಭವಾಗುತ್ತಿದೆ. ಈಗಾಗಲೇ ಮೊದಲ ಪಂದ್ಯ ಮಳೆಯಿಂದ ರದ್ದಾಗಿರುವುದರಿಂದ ಎರಡನೇ ಪಂದ್ಯವನ್ನು ಗೆಲ್ಲುವ ತವಕದಲ್ಲಿ ರೋಹಿತ್ ಶರ್ಮಾ ಪಡೆ ಸಜ್ಜುಗೊಂಡಿದೆ. ಮೊದಲ ಪಂದ್ಯ ಸೋತಿರುವ ನೇಪಾಳ ಕೂಡ ಟೀಂ ಇಂಡಿಯಾ ವಿರುದ್ಧ ಜಯಗಳಿಸುವ ಅನಿವಾರ್ಯತೆ ಎದುರಾಗಿದೆ.
ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ಮೊದಲ ಏಷ್ಯಾ ಕಪ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಈಗ ನೇಪಾಳ ವಿರುದ್ಧದ ಪಂದ್ಯಕ್ಕೂ ವರುಣ ಅಡ್ಡಿಯಾಗುವ ಸಾಧ್ಯತೆಯಿದೆ. ಪಂದ್ಯ ನಡೆಯುವ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದು, ಸೋಮವಾರ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಪಂದ್ಯ ರದ್ದಾದರೆ ಭಾರತ ರನ್ ರೇಟ್ ಆಧಾರದಲ್ಲಿ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲಿದೆ.
ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ವೈಫಲ್ಯ ಕಂಡ ಹೊರತಾಗಿಯೂ ಮಧ್ಯಮ ಕ್ರಮಾಂಕದ ಆಟಗಾರರಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ದಿಟ್ಟ ಹೋರಾಟ ಪ್ರದರ್ಶಿಸಿದ್ದರು. ಸೂಪರ್-4ಗೂ ಮುನ್ನ ಲಯ ಕಂಡುಕೊಳ್ಳಲು ರೋಹಿತ್, ಗಿಲ್, ಕೊಹ್ಲಿ, ಶ್ರೇಯಸ್ ಈ ಪಂದ್ಯವನ್ನು ಉಪಯೋಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಬುಮ್ರಾ ಬದಲಿಗೆ ಶಮಿ ಕಣಕ್ಕೆ
ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ಕಾರಣ ವೇಗದ ಬೌಲರ್ ಭಾರತಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರ ಬದಲಿಗೆ ಮೊಹಮ್ಮದ್ ಶಮಿ ಇಂದಿನ ಪಂದ್ಯದಲ್ಲಿ ಬೌಲಿಂಗ್ ಮಾಡಲಿದ್ದಾರೆ. ಬೂಮ್ರಾ ಅವರು ಸೂಪರ್-4 ಹಂತ ಆರಂಭಕ್ಕೂ ಮುನ್ನ ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ. ಭಾರತ ಸೂಪರ್-4 ಪ್ರವೇಶಿಸಿದರೆ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10ರಂದು ಆಡಲಿದೆ.
ಟೀಂ ಇಂಡಿಯಾದ ಮಾಜಿ ನಾಯಕ, ಹಾಲಿ ಬ್ಯಾಟರ್ ಕಿಂಗ್ ಕೊಹ್ಲಿ 13,000 ಸಾವಿರ ರನ್‌ಗಳ ಮೈಲಿಗಲ್ಲು ಸಾಧಿಸಲು 98 ರನ್ ಬೇಕಿದೆ. ಇವತ್ತಿನ ಪಂದ್ಯದಲ್ಲಿ ವಿರಾಟ್ ಈ ದಾಖಲೆ ಮಾಡಿದರೆ 13,000 ರನ್ ಪೂರೈಸಿದ ಟೀಂ ಇಂಡಿಯಾ ಪರ ಎರಡನೇ ಬ್ಯಾಟ್ಸಮನ್ ಹಾಗೂ ವಿಶ್ವದ 5ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸುದ್ದಿ ಓದಿದ್ದೀರಾ? ದೇಶ-ದ್ವೇಷ ಮೀರಿ ನಿಂತ ನೀರಜ್ ಚೋಪ್ರಾ – ಭಾರತದ ನಿಜವಾದ ಕ್ರೀಡಾ ಜ್ಯೋತಿ
ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದ್ದ ನೇಪಾಳ, ಈ ಪಂದ್ಯದಲ್ಲಿ ಭಾರತದ ಎದುರು ಉತ್ತಮ ಪೈಪೋಟಿ ನೀಡಲು ತವಕಿಸುತ್ತಿದೆ. ಯಾವುದೇ ಮಾದರಿಯಲ್ಲಿ ಭಾರತಕ್ಕಿದು ನೇಪಾಳ ವಿರುದ್ಧದ ಮೊದಲ ಪಂದ್ಯವಾಗಿದೆ.
ರೆಫ್ರಿಯಾಗಿ ಜಾವಗಲ್ ಶ್ರೀನಾಥ್‌ಗೆ 250ನೇ ಪಂದ್ಯ
‘ಮೈಸೂರು ಎಕ್ಸ್‌ಪ್ರೆಸ್’ ಖ್ಯಾತಿಯ ಜಾವಗಲ್ ಶ್ರೀನಾಥ್ ಅವರು ಐಸಿಸಿ ಪಂದ್ಯ ರೆಫರಿಯಾಗಿ ನೂತನ ದಾಖಲೆ ನಿರ್ಮಿಸಲಿದ್ದಾರೆ. 250 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಸಾಧನೆಯನ್ನು ಅವರು ಇಂದಿನ ಪಂದ್ಯದಲ್ಲಿ ಮಾಡಲಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟ್‌ನ ನಾಲ್ಕನೆ ರೆಫ್ರಿಯಾಗಲಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಶ್ರೀಲಂಕಾದ ರಂಜನ್ ಮದುಗಲೆ, ಇಂಗ್ಲೆಂಡಿನ ಕ್ರಿಸ್ ಬಾರ್ಡ್ ಹಾಗೂ ನ್ಯೂಜಿಲೆಂಡ್‌ನ ಜೆಫ್ ಕ್ರೋವ್ ಇದ್ದಾರೆ. ಭಾರತ ತಂಡದ ಪರ ವೇಗದ ಬೌಲರ್ ಆಗಿದ್ದ ಶ್ರೀನಾಥ್ ಅವರು 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನು ಆಡಿದ್ದರು.
ಉಭಯ ತಂಡಗಳ ಸಂಭವನೀಯ ಆಟಗಾರರ ಪಟ್ಟಿ
ಭಾರತ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ನೇಪಾಳ:
ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಬರ್ಟೆಲ್, ಆಸಿಫ್ ಶೇಖ್, ಆರಿಫ್ ಶೇಖ್, ಸೋಂಪಾಲ್, ದೀಪೇಂದ್ರ ಸಿಂಗ್, ಗುಲ್ಶನ್ ಝಾ, ಕುಶಾಲ್ ಮಲ್ಲಾ, ಕರಣ್, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ
ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್