ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯದ ಬಳಿಕ ಅತಿಥೇಯ ದೇಶ ಭಾರಿ ನಷ್ಟ ಅನುಭವಿಸಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಭಾರತ ಜಯ ಸಾಧಿಸಿದ ಚಾಂಪಿಯನ್ಸ್ ಟ್ರೋಫಿ ಆತಿಥ್ಯದಿಂದ ಸುಮಾರು ಒಂದು ಕೋಟಿ ಡಾಲರ್ ಗಳಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ.
ಇಂತಹ ಋಣಾತ್ಮಕ ಪ್ರಚಾರಕ್ಕೆ ಭಾರತದ ಮಾಧ್ಯಮಗಳ ವಿರುದ್ಧ ಪಿಸಿಬಿ ವಕ್ತಾರ ಆಮೀರ್ ಮಿರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಜಾವೇದ್ ಮುರ್ತಝಾ ಹರಿಹಾಯ್ದಿದ್ದಾರೆ. ಭವಿಷ್ಯದಲ್ಲಿ ಬಿಸಿಸಿಐ ಇನ್ನೂ ದೊಡ್ಡ ನಷ್ಟ ಅನುಭವಿಸಲಿದೆ ಎಂದು ಆಮೀರ್ ಮಿರ್ ಎಚ್ಚರಿಕೆ ನೀಡಿದ್ದಾರೆ.
“ಎಲ್ಲ ನಿರ್ಧಾರಗಳನ್ನು ಐಸಿಸಿ ಕೈಗೊಂಡಿದೆ. ಭಾರತ ಪಾಕಿಸ್ತಾನಕ್ಕೆ ಹಾನಿ ಮಾಡುವ ಪ್ರಯತ್ನ ಮಾಡಿದ್ದರೆ, ಇದಕ್ಕೆ ಬೆಲೆ ತೆರುತ್ತದೆ ಎಂದು ನಾನು ಹೇಳಬಲ್ಲೆ. ಭಾರತ-ಪಾಕಿಸ್ತಾನ ಬಿಸಿ ಕೇಕ್ ನಂತೆ ಮಾರಾಟವಾಗುತ್ತವೆ ಎಂದು ನಿಮಗೆ ಗೊತ್ತು. ಮುಂದಿನ ಮೂರು ವರ್ಷಗಳ ಕಾಲ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ. ಆದ್ದರಿಂದ ಪಾಕಿಸ್ತಾನಕ್ಕೆ ಯಾವುದೇ ಹಣಕಾಸು ನಷ್ಟವಾಗಿದ್ದರೆ, ಭಾರತಕ್ಕೆ ಪಾಕಿಸ್ತಾನ ತೆರಳದೇ ಇರುವುದರಿಂದ ಆ ದೇಶಕ್ಕೆ ಮತ್ತಷ್ಟು ದೊಡ್ಡ ನಷ್ಟವಾಗಲಿದೆ” ಎಂದು ಮಿರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನ V/s ನ್ಯೂಜಿಲೆಂಡ್ | ಬ್ಯಾಟರ್ಗಳ ಅಬ್ಬರ; ವಿಶ್ವ ದಾಖಲೆ ಛಿದ್ರಗೊಳಿಸಿದ ಪಾಕ್ ತಂಡ
ಚಾಂಪಿಯನ್ಸ್ ಟ್ರೋಫಿಗಿಂತ ಮುನ್ನ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ಪಂದ್ಯದ ಸ್ಥಳದ ಬಗ್ಗೆ ಭಾರಿ ಗೊಂದಲ ಮೂಡಿತ್ತು.ಹಲವು ತಿಂಗಳ ವಿಳಂಬದ ಬಳಿಕ, ಪಂದ್ಯ ನಡೆಯುವ ಸ್ಥಳವನ್ನು ಐಸಿಸಿ ಘೋಷಿಸಿತ್ತು. ಪಾಕಿಸ್ತಾನದ ಎಲ್ಲೆಡೆ ಮತ್ತು ತಟಸ್ಥ ಸ್ಥಳಗಳಲ್ಲಿ ಪಂದ್ಯ ನಡೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿತ್ತು.
ಅಂದರೆ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಅಡಲು ಅವಕಾಶ ಮಾಡಿಕೊಟ್ಟಿತ್ತು.2027ರ ವರೆಗೂ ಉಭಯ ದೇಶಗಳ ನಡುವಿನ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದರು.