ಟೀಂ ಇಂಡಿಯಾ ತಂಡ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ. 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅತಿಥೇಯ ತಂಡ ಭಾರತದ ಬೌಲರ್‌ಗಳ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್‌ಗಳನ್ನು ಮಾತ್ರ ಗಳಿಸಿತು.
ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 15/3, ಆವೇಶ್ ಖಾನ್ 39/2 ಹಾಗೂ ಖಲೀಲ್ ಅಹಮದ್ 15/1 ವಿಕೆಟ್ ಪಡೆದು ಜಿಂಬಾಬ್ವೆ ಗೆಲುವಿಗೆ ಅಡ್ಡಿಯಾದರು.
ಅತಿಥೇಯ ತಂಡದ ಪರ ಡಿಯೋನ್ ಮೈಯರ್ಸ್ ಅಜೇಯ 65 ರನ್ ಗಳಿಸುವ ಮೂಲಕ ಕೊನೆಯವರೆಗೂ ಹೋರಾಟ ನಡೆಸಿದರೂ ತಂಡದ ಉಳಿದ ಆಟಗಾರರು ಇವರಿಗೆ ಬೆಂಬಲ ನೀಡಲಿಲ್ಲ. ವಿಕೆಟ್ ಕೀಪರ್ ಕ್ಲಿವ್ ಮಡಂದೆ 37 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು 20ರ ಗಡಿ ದಾಟಲಿಲ್ಲ.
ಹರಾರೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಆಯ್ದುಕೊಂಡು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.
ಈ ಸುದ್ದಿ ಓದಿದ್ದೀರಾ? ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ
ಮೊದಲ ವಿಕೆಟ್ ಜೊತೆಯಾಟದಲ್ಲಿ ನಾಯಕ ಶುಭಮನ್ ಗಿಲ್ ಹಾಗೂ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 8.1 ಓವರ್‌ಗಳಲ್ಲಿ 67 ರನ್ ಪೇರಿಸಿದರು. 27 ಚೆಂಡುಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 36 ರನ್ ಗಳಿಸಿದ ಜೈಸ್ವಾಲ್, ಸಿಕಂದರ್ ರಜಾ ಬೌಲಿಂಗ್‌ನಲ್ಲಿ ಔಟಾದರು.
ನಂತರ ಇನಿಂಗ್ಸ್ ಮುಂದುವರೆಸಿದ ಗಿಲ್‌ಗೆ ಎರಡನೇ ಪಂದ್ಯದಲ್ಲಿ ಶತಕ ಸ್ಫೋಟಿಸಿದ್ದ ಯುವ ಆಟಗಾರ ಅಭಿಷೇಕ್ ಶರ್ಮಾ(10) ಹೆಚ್ಚು ಹೊತ್ತು ಜೊತೆ ನೀಡಲಿಲ್ಲ. ರುತುರಾಜ್ ಗಾಯಕ್ವಾಡ್ ಮೂರನೇ ಪಂದ್ಯದಲ್ಲಿಯೂ ಉತ್ತಮ ಆಟವಾಡಿದರು. 28 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಗಳೊಂದಿಗೆ 49 ಬಾರಿಸಿದ ರುತುರಾಜ್ 1 ರನ್‌ನಿಂದ ಅರ್ಧ ಶತಕ ವಂಚಿತರಾದರು. ಕೊನೆಯ ಓವರ್‌ಗಳಲ್ಲಿ ಬಂದ ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಅಜೇಯರಾಗುಳಿದರು.
ನಾಲ್ಕನೇ ಟಿ20 ಪಂದ್ಯ ಜುಲೈ 13 ರಂದು ನಡೆಯಲಿದ್ದು, ಅತಿಥೇಯ ಜಿಂಬಾಬ್ವೆ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಲಿದೆ.
