ಸೂಪರ್ 4ನ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡದ ವಿರುದ್ಧ 41 ರನ್‌ಗಳ ಅಂತರದಲ್ಲಿ ಜಯಗಳಿಸಿ ಏಷ್ಯಾ ಕಪ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಭಾರತಕ್ಕೆ ಸೆ.15 ರಂದು ಬಾಂಗ್ಲಾದೇಶದ ವಿರುದ್ಧ ಪಂದ್ಯವಿದ್ದರೂ ಗೆಲ್ಲಲ್ಲೇಬೇಕಾದ ಅಗತ್ಯವಿಲ್ಲ. ಇದು ಔಪಚಾರಿಕ ಪಂದ್ಯವಾಗಲಿದೆ.
ಭಾರತ ನೀಡಿದ 214 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಟೀಂ ಇಂಡಿಯಾ ಪರ ಕುಲ್‌ದೀಪ್ ಯಾದವ್ ಮತ್ತೆ ಅತ್ಯುತ್ತಮ ಬೌಲಿಂಗ್ ಮಾಡಿ 43/4 ವಿಕೆಟ್ ಗಳಿಸಿದರು. ರವೀಂದ್ರ ಜಡೇಜಾ 33/2,ಬೂಮ್ರಾ 30/2 ವಿಕೆಟ್ ಕಬಳಿಸಿದರೆ, ಪಾಂಡ್ಯಾ ಹಾಗೂ ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತು ಗೆಲುವಿನ ರೂವಾರಿಗಳಾದರು.
ಲಂಕಾ ಪರ ಧುನಿತ್ ವೆಲ್ಲಲಿಗೆ 42,ಧನಂಜಯ ಡಿಸೆಲ್ವಾ 41 ಹಾಗೂ ಚರಿತ ಅಸಲಂಕ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳ್ಯಾರು ಪ್ರತಿರೋಧ ತೋರಲಿಲ್ಲ.
ಲಂಕಾ ಸ್ವಿನ್ನರ್‌ಗಳಿಗೆ ಪರದಾಡಿದ ಭಾರತದ ಬ್ಯಾಟರ್‌ಗಳು
ಈ ಮೊದಲು ಏಷ್ಯಾ ಕಪ್ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, ಲಂಕಾ ಸ್ಪಿನ್ನರ್‌ಗಳಾದ ದುನಿತ್ ವೆಲ್ಲಲಾ ಹಾಗೂ ಚರಿತ ಅಸಲಂಕ ಅವರ ದಾಳಿಗೆ ಸಿಲುಕಿ 49.1 ಓವರ್‌ಗಳಲ್ಲಿ ಆಲೌಟ್ ಆಗಿ 213 ರನ್‌ಗಳಷ್ಟೆ ಮಾತ್ರ ಗಳಿಸಲು ಸಾಧ್ಯವಾಯಿತು.
ಟೀಂ ಇಂಡಿಯಾದ ಆರಂಭಿಕರಾದ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್‌ಗಳನ್ನು ಬೇಗ ಪಡೆದ ವೆಲ್ಲಲಾಗೆ ಲಂಕಾ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. 11.1ನೇ ಓವರ್‌ನಲ್ಲಿ ವೆಲ್ಲಲಾಗೆ ಶುಭ್ಮನ್ ಗಿಲ್ (19),13.5ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅರ್ಧ ಶತಕ ಗಳಿಸಿ ಆಡುತ್ತಿದ್ದ ನಾಯಕ ರೋಹಿತ್ ಶರ್ಮಾ (53) ಕೂಡ 15.1ನೇ ಓವರ್‌ನಲ್ಲಿ ವೆಲ್ಲಲಾಗೆ ವಿಕೆಟ್ ಒಪ್ಪಿಸಿದರು.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ | ಕುಲ್‌ದೀಪ್ ಮಾರಕ ದಾಳಿ; ಪಾಕ್ ವಿರುದ್ಧ ಭಾರತಕ್ಕೆ 228 ರನ್‌ಗಳ ಭರ್ಜರಿ ಜಯ
ಈ ವೇಳೆ ಇಶಾನ್ ಕಿಶನ್ ಅವರ ಜೊತೆಗೂಡಿದ ಕನ್ನಡಿಗ ಕೆ ಎಲ್ ರಾಹುಲ್ ತಂಡವನ್ನು ಆರಂಭಿಕ ಹಿನ್ನಡೆಯಿಂದ ಪಾರು ಮಾಡಲು ಯತ್ನಿಸಿದರು ಆದರೆ ರಾಹುಲ್ (39) ಅವರನ್ನೂ ವೆಲ್ಲಲಾಗ ಸುಲಭವಾಗಿ ಔಟ್ ಮಾಡಿದರು. ಬಳಿಕ ಇಶಾನ್ ಕಿಶನ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 61 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿ 33 ರನ್ ಗಳಿಸಿ ಚರಿತ್ ಅಸಲಂಕಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಪಾಂಡ್ಯ (5), ರವೀಂದ್ರ ಜಡೇಜಾ (4) ಬಂದಷ್ಟೇ ವೇಗವಾಗಿ ಪೆಲಿವಿಯನ್ ಸೇರಿಕೊಂಡರು. ಜಸ್ಪ್ರೀತ್ ಬುಮ್ರಾ (5) ಚರಿತ್ ಅಸಲಂಕಾ ಎಸೆತದಲ್ಲಿ ಬೋಲ್ಡ್ ಆದರು. ಕುಲ್ದೀಪ್ ಯಾದವ್ (0) ಅಸಲಂಕಾ ಎಸೆತದಲ್ಲಿ ಧನಂಜಯ ಡಿ ಸಿಲ್ವಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊನೆಯಲ್ಲಿ ಅಕ್ಷರ್ ಪಟೇಲ್ 26 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 10 ಓವರ್‌ಗಳಲ್ಲಿ 1 ಮೆಡಿನ್ ಸಹಿತ 40 ರನ್ ನೀಡಿ ಟೀಂ ಇಂಡಿಯಾದ ಪ್ರಮುಖ ಐದು ವಿಕೆಟ್ ಪಡೆದರು. ಚರಿತ್ ಅಸಲಂಕಾ 9 ಓವರ್‌ಗಳಲ್ಲಿ 18 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.
5 ವಿಕೆಟ್ ಹಾಗೂ 42 ರನ್ ಗಳಿಸಿದ ಶ್ರೀಲಂಕಾದ ದುನಿತ್ ವೆಲ್ಲಲಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು
ರೋಹಿತ್ ಶರ್ಮಾ ಹತ್ತು ಸಾವಿರ ರನ್
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ದಾಟಿದರು.
ಈ ಸಾಧನೆ ಮಾಡಿದ ಭಾರತದ ಆರನೇ ಹಾಗು ವಿಶ್ವದ 15ನೇ ಬ್ಯಾಟರ್ ಆದರು. ಲಂಕಾ ಎದುರಿನ ಪಂದ್ಯದಲ್ಲಿ ಕಸುನ್ ರಜಿತಾ ಎಸೆತವನ್ನು ಸಿಕ್ಸರ್‌ಗೆತ್ತಿದಾಗ ಅವರು ಹತ್ತು ಸಾವಿರ ರನ್ ಮೈಲುಗಲ್ಲು ದಾಟಿದರು.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರಸಿಂಗ್ ಧೋನಿ ಅವರ ಸಾಲಿಗೆ ರೋಹಿತ್ ಸೇರಿದರು.
36 ವರ್ಷದ ರೋಹಿತ್ ಇದುವರೆಗೆ 248 ಪಂದ್ಯಗಳಲ್ಲಿ ಆಡಿದ್ದಾರೆ. 30 ಶತಕ, ಮೂರು ದ್ವಿಶತಕ ಹಾಗೂ 51 ಅರ್ಧಶತಕ ಗಳಿಸಿದ್ದಾರೆ.
.