ಸ್ಯಾಫ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ಭಾರತ ಸೆಮಿ ಫೈನಲ್ ಪ್ರವೇಶಿಸಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣಲ್ಲಿ ಶನಿವಾರ ನಡೆದ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ, ನೇಪಾಳ ತಂಡವನ್ನು 2-0 ಗೋಲುಗಳಿಂದ ಮಣಿಸಿತು.
ʻಗ್ರೂಪ್-ಎʼ ನಲ್ಲಿ ಆಡಿದ 2 ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸುವ ಮೂಲಕ ಭಾರತ, ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರ ನಡೆದಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ 4-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿತ್ತು.
ಶನಿವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ದ್ವಿತಿಯಾರ್ಧದ 62ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ ಮೂಲಕ ಭಾರತ ಗೋಲಿನ ಖಾತೆ ತಗೆರೆದಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ತಮ್ಮ ಗೋಲಿನ ಗಳಿಕೆಯನ್ನು ಛೆಟ್ರಿ 91ಕ್ಕೆ ಏರಿಸಿಕೊಂಡರು.
ಈ ಸುದ್ದಿ ಓದಿದ್ದೀರಾ?: ಸ್ಯಾಫ್ ಚಾಂಪಿಯನ್‌ಶಿಪ್ | ಛೆಟ್ರಿ ಹ್ಯಾಟ್ರಿಕ್; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಇದಾದ 8ನೇ ನಿಮಿಷದಲ್ಲಿ ನವೋರೆಮ್ ಮಹೇಶ್ ಸಿಂಗ್, ತಂಡಕ್ಕೆ ಎರಡನೇ ಗೋಲಿನ ಕೊಡುಗೆ ನೀಡಿದರು. ಮಣಿಪುರ ಮೂಲದ ವಿಂಗರ್ ಮಹೇಶ್, ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯದಲ್ಲಿ ದಾಖಲಿಸಿದ ಚೊಚ್ಚಲ ಗೋಲು ಇದಾಗಿತ್ತು.
ಮಂಗಳವಾರ ನಡೆಯುವ ಗುಂಪು ಹಂತದ ಮೂರನೇ ಪಂದ್ಯದಲ್ಲಿ ಭಾರತ, ಗ್ರೂಪ್-ಎʼ ಅಗ್ರಸ್ಥಾನಿ ಕುವೈತ್ ಸವಾಲನ್ನು ಎದುರಿಸಲಿದೆ.