- ಪಂಜಾಬ್ ಮತ್ತು ಗುಜರಾತ್ ಎರಡು ಪಂದ್ಯಗಳು ಗೆದ್ದು ಒಂದು ಪಂದ್ಯ ಸೋತಿವೆ
- ಟಾಸ್ ಗೆದ್ದರೆ ಬ್ಯಾಟಿಂಗ್‌ಗಿಂತ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು
ಮೊದಲ ಎರಡು ಪಂದ್ಯಗಳನ್ನು ಗೆದ್ದು, ಒಂದೊಂದು ಪಂದ್ಯ ಸೋತಿರುವ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 2023ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಣಸುತ್ತಿವೆ. ಅಂಕಪಟ್ಟಿಯಲ್ಲಿ ಉಭಯ ತಂಡಗಳೂ ತಲಾ 4 ಅಂಕ ಗಳಿಸಿವೆ.
ರಿಂಕು ಸಿಂಗ್ ಸ್ಫೋಟಕ ಆಟದಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದ್ದ ಗುಜರಾತ್ ಟೈಟಾನ್ಸ್ ಪುನಃ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಇಂದು (ಏಪ್ರಿಲ್ 13) ನಡೆಯುವ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಜಯಗಳಿಸುವ ನಿರೀಕ್ಷೆಯಲ್ಲಿದೆ.
ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಕೂಡಾ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 8 ವಿಕೆಟ್‌ಗಳಿಂದ ಸೋತಿದ್ದು, ಮತ್ತೆ ಗೆಲುವನ್ನು ದಾಖಲಿಸಲು ತವಕಿಸತ್ತಿದೆ.
ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿರುವ ಶಿಖರ್ ಧವನ್ ಪಂಜಾಬ್‌ನ ಪ್ರಮುಖ ಶಕ್ತಿ. ಈಗಾಗಲೇ ಮೂರು ಪಂದ್ಯಗಳಿಂದ 225 ರನ್ ಬಾರಿಸಿದ್ದಾರೆ. ಐಪಿಎಲ್ ಹರಾಜಿನ ದುಬಾರಿ ಆಟಗಾರ ಸ್ಯಾಮ್ ಕರ್ರನ್ ನಾಲ್ಕನೇ ಪಂದ್ಯದಲ್ಲಿ ಮಿಂಚುವ ಉತ್ಸಾಹದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಮತ್ತೊಬ್ಬ ಪ್ರಭಾವಿ ಆಟಗಾರ ಲಿವಿಂಗ್ಸ್ಟೋನ್ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.
ಪಂಜಾಬ್ ಪರವಾಗಿ ಪ್ರಭ್ಸಿಮ್ರಾನ್, ಜಿತೇಶ್ ಶರ್ಮಾ ಅವರೊಂದಿಗೆ ಶಾರೂಖ್ ಖಾನ್ ತಮ್ಮ ಶಕ್ತಿ ತೋರಿಸಲು ಸಿದ್ಧರಾಗಿದ್ದಾರೆ. ಬೌಲಿಂಗ್ ಪ್ರತಿಭೆಗಳಾದ ಕಗಿಸೋ ರಬಾಡ ಸೇರ್ಪಡೆ ಬೌಲಿಂಗ್ ವಿಭಾಗಕ್ಕೆ ಬಲ ಒದಗಿಸಿದ್ದು, ಅರ್ಶದೀಪ್ ಸಿಂಗ್ ಹಾಗೂ ನೇಥನ್ ಎಲ್ಲಿಸ್ ಎದುರಾಳಿಗಳಿಗೆ ಟಾಂಗ್ ನೀಡಲು ಸಜ್ಜಾಗಿದ್ದಾರೆ.
ಇತ್ತ, ಹಾಲಿ ಚಾಂಪಿಯನ್ ಗುಜರಾತ್ ತಂಡದಲ್ಲಿ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಶೀದ್ ಖಾನ್, ಹಾರ್ದಿಕ್ ಕೂಡಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವುದರ ಜೊತೆಗೆ ಬೌಲಿಂಗ್‌ನಲ್ಲೂ ಎದುರಾಳಿ ತಂಡದ ಆಟಗಾರರ ನಿದ್ದೆಗೆಡಿಸುತ್ತಿದ್ದಾರೆ.
ವೇಗದ ಬೌಲರ್‌ಗಳಾದ ಮೊಹಮದ್ ಶಮಿ ಮತ್ತು ಅಲ್ಜಾರಿ ಜೋಸೆಫ್ ವಿಕೆಟ್ ಪಡೆಯುವುದರೊಂದಿಗೆ ರನ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪಾಂಡ್ಯ ನೇತೃತ್ವದ ಪಡೆಯಲ್ಲಿ ಟೀಮ್ ವರ್ಕ್ ಸದ್ಬಳಕೆಯಾಗುತ್ತಿದೆ.
ಒಟ್ಟು ಮುಖಾಮುಖಿ: 02
ಗುಜರಾತ್: 01
ಪಂಜಾಬ್ : 01
ಸಂಭವನೀಯ ಆಟಗಾರರು
ಗುಜರಾತ್ ಟೈಟಾನ್ಸ್:
ವೃದ್ದಿಮಾನ್ ಸಾಹ , ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಜೋಶ್ವಾ ಲಿಟ್ಲ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.
ಪಂಜಾಬ್ ಕಿಂಗ್ಸ್:
ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರೂಖ್ ಖಾನ್, ಹಪ್ರೀರ್ತ್ ಬ್ರಾರ್, ರಾಹುಲ್ ಚಹರ್, ಅರ್ಶ್‌ದೀಪ್ ಸಿಂಗ್, ಕಗಿಸೋ ರಬಾಡ
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ಆ್ಯಪ್
ಪಿಚ್ ರಿಪೋರ್ಚ್
ಮೊಹಾಲಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿದ ಉದಾಹರಣೆ ಹಿಂದಿನ ಪಂದ್ಯಗಳಿಂದ ಗೊತ್ತಾಗಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡರೆ ಮತ್ತೊಮ್ಮೆ ರನ್ ಮಳೆ ಹರಿಯುವ ನಿರೀಕ್ಷೆ ಇದೆ.
ಅಲ್ಲದೆ ವೇಗಿಗಳಿಗೂ ಈ ಪಿಚ್ ಅನುಕೂಲವಾಗುವ ಸಾಧ್ಯತೆಯಿದೆ. ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್‌ಗಿಂತ ಹೆಚ್ಚು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.