- ಪ್ಲೇ ಆಫ್ ಪಯಣದಲ್ಲಿ ಧೋನಿ ಪಡೆಗೆ ಹಿನ್ನಡೆ
- ಕೆಕೆಆರ್ ವಿರುದ್ಧ ಚೆನ್ನೈ ತಂಡಕ್ಕೆ ಸೋಲು
ಐಪಿಎಲ್ 16ನೇ ಆವೃತ್ತಿಯ ಪ್ಲೇ ಆಫ್ ಕುತೂಹಲ ಮತ್ತೆ ಮುಂದುವರಿದಿದೆ. ಭಾನುವಾರದ ಎರಡನೇ ಪಂದ್ಯದಲ್ಲಿ ತವರಿನಂಗಳದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಕೆಆರ್ ವಿರುದ್ಧ ಸೋಲು ಕಂಡಿದೆ. ಆ ಮೂಲಕ ಪ್ಲೇ ಆಫ್ ಪಯಣದಲ್ಲಿ ಧೋನಿ ಪಡೆ ಹಿನ್ನಡೆ ಕಂಡಿದೆ.
ಸಿಎಸ್‌ಕೆ ಮುಂದಿಟ್ಟಿದ್ದ 145 ರನ್‌ಗಳ ಸಾಮಾನ್ಯ ಸವಾಲನ್ನು ಕೋಲ್ಕತ್ತಾ ನೈಟ್ ರೈಡರ್ಸ್ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಸುಲಭವಾಗಿಯೇ ಚೇಸ್ ಮಾಡಿತು.
15 ಅಂಕಗಳನ್ನು ಹೊಂದಿರುವ ಚೆನ್ನೈ, ಮೇ 20ರಂದು ನಡೆಯುವ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಪ್ಲೇ ಆಫ್ ಪ್ರವೇಶಿಸಲು ಚೆನ್ನೈ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
13 ಪಂದ್ಯಗಳಿಂದ ಕೆಕೆಆರ್ 12 ಅಂಕಗಳನ್ನು ಹೊಂದಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಂತಿಮ ಪಂದ್ಯವನ್ನಾಡಲಿದೆ.
ಕೈ ಕೊಟ್ಟ ಬ್ಯಾಟಿಂಗ್!
ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಧೋನಿ ನಿರ್ಧಾರ ತಂಡಕ್ಕೆ ನೆರವಾಗಲಿಲ್ಲ. ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಚೆನ್ನೈ ಮೊದಲ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 68 ರನ್‌ಗಳಿಸಿತ್ತು. ನಂತರದ 10 ಓವರ್‌ಗಳಲ್ಲಿ ಗಳಿಸಿದ್ದು 76 ರನ್.
ಶಿವಂ ದುಬೆ ಅಜೇಯ 48 ಮತ್ತು ಆರಂಭಿಕ ಡೆವೋನ್ ಕಾನ್ವೆ 30 ರನ್‌ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಬ್ಯಾಟರ್‌ಗಳು ತಂಡಕ್ಕೆ ನೆರವಾಗಲಿಲ್ಲ.
ರಾಣಾ-ರಿಂಕು ಶತಕದ ಜೊತೆಯಾಟ
ಚೇಸಿಂಗ್ ವೇಳೆ ಕೆಕೆರ್ 33 ರನ್‌ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ನಾಯಕ ನಿತೀಶ್ ರಾಣಾ ಮತ್ತು ಎಡಗೈ ಬ್ಯಾಟರ್ ರಿಂಕು ಸಿಂಗ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಿಂಕು ಸಿಂಗ್ 54 ರನ್‌ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ರಾಣಾ 57 ರನ್‌ಗಳಿಸಿ ಅಜೇಯರಾಗುಳಿದರು.