ಐಪಿಎಲ್ 16ನೇ ಆವೃತ್ತಿಯ ‘ಸೂಪರ್ ಸಂಡೆ’ ಕದನದಲ್ಲಿ ಎರಡು ಪಂದ್ಯಗಳು ನಡೆಯಲಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.
ಸಂಜೆ ಅಹಮದಾಬಾದ್ ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ – ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದೆ.
ಹಾಲಿ ಚಾಂಪಿಯನ್ಸ್ ಜಿಟಿ ಮತ್ತು ಸಂಜು ಸಾರಥ್ಯದ ಆರ್ ಅರ್ ನಡುವಿನ ಕದನ ತೀವ್ರ ಕುತೂಹಲ ಕೆರಳಿಸಿದೆ.
ಮುಂಬೈ vs ಕೆಕೆಆರ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 22ನೇ ಪಂದ್ಯ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡಲಿದೆ.
ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡುವ ಉದ್ದೇಶದಿಂದ, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚೊಚ್ಚಲ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನೇರಿರುವ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಜೆರ್ಸಿಯನ್ನು ಧರಿಸಿ ಭಾನುವಾರ ರೋಹಿತ್ ಶರ್ಮಾ ಪಡೆ ವಾಂಖೆಡೆಯಲ್ಲಿ ಕಣಕ್ಕಿಳಿಯಲಿದೆ.
ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ಟಾಸ್‌ನಲ್ಲಿ ಭಾಗವಹಿಸಲಿದ್ದಾರೆ.
19 ಸಾವಿರ ಹೆಣ್ಣು ಮಕ್ಕಳಿಗೆ ಉಚಿತ ಪ್ರವೇಶ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ವಾರ್ಷಿಕ ಶಿಕ್ಷಣ ಮತ್ತು ಎಲ್ಲರಿಗೂ ಕ್ರೀಡೆ (ಇಸಿಎ) ಅಂಗವಾಗಿ 19 ಸಾವಿರ ಹೆಣ್ಣು ಮಕ್ಕಳಿಗೆ ಮುಂಬೈ ಫ್ರಾಂಚೈಸಿ ಉಚಿತ ಟಿಕೆಟ್ ನೀಡಿದೆ.
ಇವರೆಲ್ಲರೂ ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿಯನ್ನು ತೊಟ್ಟು ತಂಡಕ್ಕೆ ಬೆಂಬಲ ನೀಡಲಿದ್ದಾರೆ.
ಉಚಿತ ಪ್ರವೇಶದ ಜೊತೆಗೆ ಊಟ ಮತ್ತು ಸಾರಿಗೆ ವ್ಯವಸ್ಥೆಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನೋಡಿಕೊಳ್ಳಲಿದೆ.