ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ (ಅಜೇಯ 97) ಹಾಗೂ ಬೌಲರ್‌ಗಳ ಕರಾರುವಕ್ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲು ಗೆಲುವು ದಾಖಲಿಸಿದೆ. ಈ ಮೂಲಕ ಆರ್‌ಆರ್ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 17.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 153 ರನ್ ಕಲೆ ಹಾಕಿ ಜಯ ಸಾಧಿಸಿತು.
ಡಿಕಾಕ್ ಅಜೇಯ 97 ರನ್‌ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸುನಿಲ್ ನರೈನ್ ಅವರ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಮೋಯಿನ್ ಅಲಿ ಹಾಗೂ ಕ್ವಿಂಟನ್ ಡಿಕಾಕ್ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಬೀಳದಂತೆ ನೋಡಿಕೊಂಡರು. ಈ ಜೋಡಿ ಪವರ್ ಪ್ಲೇನಲ್ಲಿ 41 ರನ್ ಸೇರಿಸಿತು. ಮೋಯಿನ್ ಅಲಿ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಅವರನ್ನು ಸೇರಿಕೊಂಡ ಅಜಿಂಕ್ಯ ರಹಾನೆ ಸಾಧಾರಣ ಆಟವನ್ನು ಆಡಿದರು. ಈ ಜೋಡಿ 24 ಎಸೆತಗಳಲ್ಲಿ 29 ರನ್ ಸಿಡಿಸಿತು. ನಾಯಕ ಅಜಿಂಕ್ಯ ರಹಾನೆ 15 ಎಸೆತಗಳಲ್ಲಿ 18 ರನ್ ಬಾರಿಸಿ ಔಟ್ ಆದರು.
ಮೂರನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ಯುವ ಆಟಗಾರ ಆಂಗ್ರಿಕ್ಷ್ ರಘುವಂಶಿ (22) ಜೋಡಿ ಉತ್ತಮ ಆಟವನ್ನು ಆಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ರಾಜಸ್ಥಾನ ವಿಫಲವಾಯಿತು. ಈ ಜೋಡಿ 44 ಎಸೆತಗಳಲ್ಲಿ ಅಜೇಯ 83 ರನ್‌ಗಳ ಜತೆಯಾದ ಕಾಣಿಕೆ ನೀಡಿತು. ಭರವಸೆಯ ಆಟಗಾರ ಕ್ವಿಂಟನ್ ಡಿಕಾಕ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 8 ಬೌಂಡರಿ 6 ಸಿಕ್ಸರ್ ಸಹಾಯದಿಂದ ಅಜೇಯ 97 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
ಈ ಸುದ್ದಿ ಓದಿದ್ದೀರಾ? ಏರ್ ಇಂಡಿಯಾ ವಿರುದ್ಧ ಕ್ರಿಕೆಟಿಗ ಡೇವಿಡ್ ವಾರ್ನರ್ ಆಕ್ರೋಶ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ (13) ಜೋಡಿ ತಂಡಕ್ಕೆ ಉತ್ತಮ ಆರಂಭದ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಈ ಜೋಡಿ 23 ಎಸೆತಗಳಲ್ಲಿ 33 ರನ್ ಸೇರಿಸಿತು. ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಅವರನ್ನು ಕೂಡಿಕೊಂಡ ರಿಯಾನ್ ಪರಾಗ್ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು.
ಆದರೆ ಈ ಜೋಡಿ ಸಹ ದೊಡ್ಡ ಜತೆಯಾಟದ ಕಾಣಿಕೆ ನೀಡಲಿಲ್ಲ. ಈ ಜೋಡಿ 24 ಎಸೆತಗಳಲ್ಲಿ 34 ರನ್ ಸೇರಿಸಿತು. ಪರಾಗ್ 15 ಎಸೆತಗಳಲ್ಲಿ 25 ರನ್ ಬಾರಿಸಿ ಔಟ್ ಆದರೆ, ಯಶಸ್ವಿ ಜೈಸ್ವಾಲ್ 24 ಎಸೆತಗಳಲ್ಲಿ 29 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ, ವನಿಂದು ಹಸರಂಗಾ, ಶುಭಂ ದುಬೆ, ಶಿಮ್ರೋನ್ ಹೆಟ್ಮೆಯರ್, ಹೆಚ್ಚು ರನ್ ಗಳಿಸಲಿಲ್ಲ. ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ತಂಡಕ್ಕೆ ಕೊಂಚ ಆಧಾರವಾದರು.
ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 28 ಎಸೆತಗಳಲ್ಲಿ 33 ರನ್ ಸಿಡಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಜೋಫ್ರಾ ಆರ್ಚರ್ 2 ಸಿಕ್ಸರ್ ಸಹಯಾದಿಂದ 16 ರನ್ ಸಿಡಿಸಿದರು. ಕೆಕೆಆರ್ ಪರ ವೈಭವ್ ಆರೋರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮೋಯಿನ್ ಅಲಿ ತಲಾ 2 ವಿಕೆಟ್ ಕಬಳಿಸಿದರು.