ಐಪಿಎಲ್ | ಸಿಎಸ್‌ಕೆ ವಿರುದ್ಧ ಇಂದು ಆರ್‌ಸಿಬಿ ಪಂದ್ಯ: ಚೆನ್ನೈಯ ಮನೆಯಲ್ಲಿ ಪಾರ್ಟಿ ಆಯೋಜಿಸಿದ ಕೋಚ್ ದಿನೇಶ್ ಕಾರ್ತಿಕ್

Date:

Advertisements

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನ ಹೈವೋಲ್ಟೇಜ್‌ ಪಂದ್ಯ ಎಂದೇ ಗುರುತಿಸಿಕೊಂಡಿರುವ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ಇಂದು(ಮಾ.28) ಚೆನ್ನೈನಲ್ಲಿ ಪಂದ್ಯ ನಡೆಯುತ್ತಿದೆ.

ಶುಕ್ರವಾರ ಸಂಜೆ ನಡೆಯುವ ಈ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದ್ದು, ಯಾರು ಈ ಪಂದ್ಯದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

ಕೆಕೆಆರ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ, ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಎರಡನೇ ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

Advertisements

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಸೋಲಿಸಿ 17 ವರ್ಷಗಳಾಗಿದ್ದು, ಈ ಬಾರಿಯಾದರೂ ಗೆಲುವು ಕಾಣಲಿದೆಯೇ ಎಂದು ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವನ್ನು ಗಮನಿಸುತ್ತಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸಲು ಆರ್‌ಸಿಬಿಗೆ ಕಳೆದ 17 ವರ್ಷಗಳಿಂದ ಸಾಧ್ಯವಾಗಿಲ್ಲ ಎಂಬ ನೋವು ಆರ್‌ಸಿಬಿ ಅಭಿಮಾನಿಗಳನ್ನು ಕಾಡುತ್ತಿದ್ದು, ಈ ಬಾರಿ ಅದಕ್ಕೆ ಫುಲ್ ಸ್ಟಾಪ್ ಹಾಕುವ ಭರವಸೆಯಲ್ಲಿದ್ದಾರೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈಯೇ ಮೇಲುಗೈ ಹೊಂದಿದೆ. ಉಭಯ ತಂಡಗಳು ಐಪಿಎಲ್‌ನಲ್ಲಿ ಒಟ್ಟು 33 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಸಿಎಸ್‌ಕೆ 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರ್‌ಸಿಬಿ 11 ಪಂದ್ಯಗಳನ್ನಷ್ಟೇ ಗೆದ್ದಿದೆ. ಐಪಿಎಲ್ ಆರಂಭವಾಗಿದ್ದ ಮೊದಲ ವರ್ಷವಾದ 2008ರಲ್ಲಷ್ಟೇ ಆರ್‌ಸಿಬಿ ಚೆನ್ನೈ ಅಂಗಳದಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆದ್ದಿತ್ತು. ಆ ಬಳಿಕ ಈವರೆಗೂ ಚೆನ್ನೈ ತವರಲ್ಲಿ ಆರ್‌ಸಿಬಿಗೆ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಈಗ ಈ ಗೆಲುವಿನ ಬರವನ್ನು ಕೊನೆಗೊಳಿಸುವ ಲೆಕ್ಕಾಚಾರದಲ್ಲಿದೆ ಆರ್‌ಸಿಬಿ.

ಈಗಾಗಲೇ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಈಚೆಗಷ್ಟೇ ತನ್ನ ಮೊದಲ ಪಂದ್ಯವಾಡಿದ್ದ ಚೆನ್ನೈ ಬಳಗವು ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಜಯ ಸಾಧಿಸಿತ್ತು. ಇನ್ನೊಂದೆಡೆ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಅವರ ತವರು ಈಡನ್‌ಗಾರ್ಡನ್‌ನಲ್ಲಿ ಸೋಲಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹೀಗಾಗಿ, ಎರಡೂ ತಂಡಗಳು ಗೆಲುವಿನ ಆತ್ಮವಿಶ್ವಾಸದಲ್ಲಿದೆ.

ಆರ್‌ಸಿಬಿಯನ್ನು ನೂತನ ನಾಯಕ ರಜತ್‌ ಪಾಟೀದಾರ್ ಮುನ್ನಡೆಸುತ್ತಿದ್ದು, ಚೆನ್ನೈ ತಂಡವನ್ನು ಮಹೇಂದ್ರಸಿಂಗ್ ಧೋನಿಯ ನಂತರ ಕಳೆದ ವರ್ಷದಿಂದ ಋತುರಾಜ್ ಗಾಯಕ್‌ವಾಡ್ ಅವರು ಮುನ್ನಡೆಸುತ್ತಿದ್ದಾರೆ. ಹೀಗಾಗಿ, ಉಭಯ ತಂಡಗಳೂ ಶುಕ್ರವಾರ ಮುಖಾಮುಖಿಯಾಗಲಿರುವ ಪಂದ್ಯವು ಕುತೂಹಲ ಕೆರಳಿಸಿದೆ.

ಸ್ಪಿನ್ನರ್‌ಗಳಿಗೆ ಆದ್ಯತೆ?

ಚೆನ್ನೈಯ ಮೈದಾನವು ಸ್ಪಿನ್ನರ್‌ಗಳಿಗೆ ವರದಾನವಾಗಿದ್ದು, ಹಾಗಾಗಿ ಉಭಯ ತಂಡಗಳು ವೇಗದ ಬೌಲರ್‌ಗಳಿಗಿಂತ ಸ್ಪಿನ್ನರ್‌ಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದ, ಇದೇ ಮೊದಲ ಬಾರಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ, ಚೆಪಾಕ್ ಮೈದಾನದಲ್ಲಿಯೂ ಅವರು ತಮ್ಮ ಕೈಚಳಕ ಮೆರೆಯಲಿದ್ದಾರಾ ಎಂದು ಕಾದುನೋಡಬೇಕಿದೆ.

ಕೃಣಾಲ್ ಅವರೊಂದಿಗೆ ಸುಯಶ್ ಶರ್ಮಾ ಭರವಸೆಯ ಸ್ಪಿನ್ನರ್ ಆಗಿ ಸಹಕಾರ ನೀಡಲಿದ್ದಾರೆ. ವೇಗದ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ಹಾಗೂ ಯಶ್ ದಯಾಳ್ ಮೋಡಿ ಮಾಡುವ ಯೋಜನೆಯಲ್ಲಿದ್ದಾರೆ. ಯಶ್ ದಯಾಳ್ ಅವರು, 2024ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಯಾರೂ ನಿರೀಕ್ಷಿಸದ ರೀತಿಯಲ್ಲಿ ಗೆಲುವಿಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಾಕೌಟ್ ಪಂದ್ಯದಲ್ಲಿ ಗೆದ್ದಿದ್ದ ಆರ್‌ಸಿಬಿ, ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿತ್ತು.

ಕೆಕೆಆರ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಭುವನೇಶ್ವರ್‌ ಕುಮಾರ್ ಗಾಯದಿಂದ ಚೇತರಿಸಿಕೊಂಡಿದ್ದು, ಎರಡನೇ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆಯಾದರೂ, ಈವರೆಗೆ ಈ ಬಗ್ಗೆ ಆರ್‌ಸಿಬಿ ಎಲ್ಲಿಯೂ ಕೂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಯಾವುದಕ್ಕೂ ಇಂದು ಸಂಜೆ 7ರ ನಂತರವಷ್ಟೇ ಅದು ತಿಳಿದುಬರಲಿದೆ.

ಸಿಎಸ್‌ಕೆ ತಂಡದ ಸ್ಪಿನ್ ವಿಭಾಗ ಕೂಡ ಉತ್ತಮವಾಗಿದ್ದು, ಆಫ್‌ಸ್ಪಿನ್ನರ್ ಆರ್. ಅಶ್ವಿನ್, ಎಡಗೈ ಸ್ಪಿನ್‌–ಆಲ್‌ರೌಂಡರ್‌ ರವೀಂದ್ರ ಜಡೇಜ ಹಾಗೂ ಅಫ್ಘಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ ಅವರಿದ್ದಾರೆ.

ಎರಡೂ ತಂಡಗಳು ಉತ್ತಮ ಬ್ಯಾಟಿಂಗ್ ವಲಯವನ್ನು ಹೊಂದಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಅಥವಾ ಸಿಎಸ್‌ಕೆಯ ಯಾವ ಬ್ಯಾಟರ್‌ಗಳು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಕೂಡಿ, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಮಹತ್ವದ ಪಂದ್ಯಕ್ಕೂ ಮುನ್ನ ಚೆನ್ನೈಯ ಮನೆಯಲ್ಲಿ ಪಾರ್ಟಿ ಆಯೋಜಿಸಿದ ಕೋಚ್ ದಿನೇಶ್ ಕಾರ್ತಿಕ್

ಮೂಲತಃ ತಮಿಳುನಾಡಿನವರಾದ ಆರ್‌ಸಿಬಿಯ ಮಾಜಿ ಆಟಗಾರ, ಸದ್ಯ ಆರ್‌ಸಿಬಿಯ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿ ಕರ್ತವ್ಯದಲ್ಲಿರುವ ದಿನೇಶ್ ಕಾರ್ತಿಕ್, ಮಹತ್ವದ ಪಂದ್ಯಕ್ಕೂ ಮುನ್ನ ಚೆನ್ನೈಯ ಮನೆಯಲ್ಲಿ ಆರ್‌ಸಿಬಿ ಆಟಗಾರರಿಗೆ ಪಾರ್ಟಿ ಆಯೋಜಿಸಿದ್ದರು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ದಿನೇಶ್ ಕಾರ್ತಿಕ್, ರೀಲ್ಸ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ದಿನೇಶ್ ಕಾರ್ತಿಕ್ ಕುಟುಂಬದ ಸದಸ್ಯರು ಕೂಡ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X