ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ದಾಖಲೆ ನಿರ್ಮಿಸಿದೆ. ಐವರಿ ಕೋಸ್ಟ್ ತಂಡ ಕೇವಲ 7 ರನ್‌ಗಳಿಗೆ ಆಲೌಟ್ ಆಗಿ 264 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಲಾಗೋಸ್‌ನಲ್ಲಿ ನಡೆಯುತ್ತಿರುವ ಐಸಿಸಿ ಅಂತಾರಾಷ್ಟ್ರೀಯ ಪುರುಷರ ಟಿ20 ವಿಶ್ವಕಪ್ ಸಬ್ ರೀಜನಲ್ ಆಫ್ರಿಕಾ ಕ್ವಾಲಿಫೈಯರ್ ಗ್ರೂಪ್ ಸಿ ಪಂದ್ಯದಲ್ಲಿ ಐವರಿ ಕೋಸ್ಟ್ ನೈಜೀರಿಯಾ ವಿರುದ್ಧ 7 ರನ್‌ಗಳಿಗೆ ಆಲೌಟ್ ಆಗಿ ಹೊಸ ದಾಖಲೆ ನಿರ್ಮಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನೈಜೀರಿಯಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿತ್ತು. ಸಲೀಮ್ ಸಲಾಲು 112, ಸುಲೇಮಾನ್ ರುನ್‌ಸೆವೆ 50 ಹಾಗೂ ಐಸಾಕ್ ಒಪ್ಕೆ 65 ರನ್ ಪೇರಿಸಿದ ಪರಿಣಾಮ ನೈಜೀರಿಯಾ 271 ರನ್ ಬಾರಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಐವರಿ ಕೋಸ್ಟ್ ತಂಡ 7.3 ಓವರ್‌ಗಳಲ್ಲಿ 7 ರನ್‌ಗಳಿಗೆ ಆಲೌಟ್ ಆಯಿತು. ತಂಡದ 7 ಮಂದಿ ಶೂನ್ಯ ದಾಖಲಿಸಿದರೆ, ಮೂವರು ಕೇವಲ 1 ರನ್ ಕಲೆ ಹಾಕಿದರು. ಓರ್ವ ಮಾತ್ರ 4 ರನ್ ಗಳಿಸಿ ಔಟಾದ.
ಈ ಸುದ್ದಿ ಓದಿದ್ದೀರಾ? ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ
ಈ ಮೊತ್ತ ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಅತೀ ಕಡಿಮೆ ಮೊತ್ತವಾಗಿದೆ. ಇದಕ್ಕೂ ಮೊದಲು ಮಂಗೋಲಿಯಾ ತಂಡ ಹಾಗೂ ಐಸಲ್ ಆಫ್ ಮನ್ ತಂಡ ಕೇವಲ 10 ರನ್‌ಗೆ ಆಲೌಟಾಗಿತ್ತು.
ನೈಜೀರಿಯಾ ತಂಡ 264 ರನ್‌ಗಳ ಅಂತರದಲ್ಲಿ ಗೆಲುವು ಗಳಿಸಿರುವುದು ಟಿ20 ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರನೇ ಅತೀ ದೊಡ್ಡ ಅಂತರದ ಗೆಲುವಾಗಿದೆ. ಜಿಂಬಾಬ್ವೆ ತಂಡ ಗಾಂಬಿಯಾ ವಿರುದ್ಧ ಕಳೆದ ತಿಂಗಳು 290 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. 2023ರ ಸೆಪ್ಟೆಂಬರ್ ತಿಂಗಳಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 273 ರನ್ನುಗಳ ಅಂತರದಲ್ಲಿ ಜಯಗಳಿಸಿತ್ತು.
