ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಕಿ ಇರುವ ಒಂದು ಪ್ಲೇ-ಆಫ್ ಸ್ಥಾನಕ್ಕಾಗಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯೆ ‘ನಾಕೌಟ್’ ಪಂದ್ಯ ನಡೆಯಲಿದೆ. ಈ ಪಂದ್ಯದ ವೇಳೆಯಲ್ಲಿ ಸ್ಟೇಡಿಯಂಗೆ ನುಗ್ಗೋದಾಗಿ ಹೇಳಿ, ಪೊಲೀಸರಿಗೆ ಚಾಲೆಂಜ್ ಹಾಕಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
‘ಕ್ಲೌಟ್ ಚೇಸರ್ಸ್’ನ ಸಹ ಸಂಸ್ಥಾಪಕರಾಗಿರುವ ಬೆಂಗಳೂರಿನ ನಿತಿನ್ ಸಿಕ್ವೇರಾ ಎಂಬ ನೆಟ್ಟಿಗನೋರ್ವ, ” ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯೆ ಮೇ 18 ರಂದು ನಡೆಯಲಿರುವ ಐಪಿಎಲ್ ಪಂದ್ಯದ ಟಿಕೆಟ್ ನನಗೆ ಸಿಕ್ಕಿದೆ. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಾದ್ಯಂತ ಓಡುತ್ತೇನೆ” ಎಂದು ಪೊಲೀಸರಿಗೆ ಸವಾಲೆಸೆದಿದ್ದ. ಆತನ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆ ಬಳಿಕ ಅದು ಸುದ್ದಿಯಾಗಿತ್ತು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆತನ ವೈರಲ್ ಪೋಸ್ಟ್ ಆಧರಿಸಿ ಮುನ್ನೆಚ್ಚರಿಕೆ ವಹಿಸಿ, ಆತನನ್ನು ಶನಿವಾರ ಬೆಳಗ್ಗೆ ಬಂಧಿಸಿರುವುದಾಗಿ ತಿಳಿದುಬಂದಿದೆ.
Nice try, Buddy! 🏏 But attempting to breach security during #IPL is a guaranteed six straight into our custody. Sorry, mate, you’re stumped! #RCBvsCSK #WeServeWeProtect pic.twitter.com/Dj4sMXq9jt
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 18, 2024
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸರು, “ಒಳ್ಳೆಯ ಪ್ರಯತ್ನ, ಗೆಳೆಯ. ಆದರೆ ಐಪಿಎಲ್ ಪಂದ್ಯದ ಸಮಯದಲ್ಲಿ ಭದ್ರತೆಯನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನೇರವಾಗಿ ಹೊಡೆಯುವ ಸಿಕ್ಸ್ ನಮ್ಮ ಕಸ್ಟಡಿಗೆ ಬರಲಿದೆ ಎಂಬುದು ಗ್ಯಾರಂಟಿ. ಕ್ಷಮಿಸು ಸಂಗಾತಿ, ನೀನು ಸ್ಟಂಪ್ ಆಗಿದ್ದೀಯಾ” ಎಂದು ಟ್ರೋಲ್ ಶೈಲಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೊಲೀಸರ 30 ಸೆಕೆಂಡ್‌ನ ವಿಡಿಯೋ ಪೋಸ್ಟ್ ಈಗ ವೈರಲ್ ಆಗಿದೆ.
ಯುವಕ ನಿತಿನ್ ಸಿಕ್ವೇರಾನನ್ನು ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ಬೆಳಗ್ಗೆ ಬಂಧಿಸಿರುವುದಾಗಿ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಹಲವು ಮಂದಿ ಶ್ಲಾಘಿಸಿದ್ದು, “ಭದ್ರತೆಗೆ ಸವಾಲೆಸೆಯುವವರಿಗೆ ತಕ್ಕಪಾಠ ಕಲಿಸಿದ್ದೀರಿ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Today Cubbon Park Police made preventive detention, based on his viral post.
Nitin Sequeira, a Bengaluru man, who is the co-founder of Clout Chasers, recently said that he will “run across” the city’s Chinnaswamy Stadium during the IPL match on May 18@mufaddal_vohra https://t.co/Z7yB4QgkML
— Irshad Venur ಇರ್ಷಾದ್ ವೇಣೂರು (@muhammadirshad6) May 18, 2024
ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. ಐಪಿಎಲ್ ಪಂದ್ಯ ಬಂದೋಬಸ್ತ್‌ಗೆ 1,200 ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಐಪಿಎಲ್ | ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್
ನಾಲ್ವರು ಡಿಸಿಪಿಗಳು, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿ ಒಟ್ಟು 1,200 ಪೊಲೀಸರನ್ನು ಕ್ರೀಡಾಂಗಣದ ಸುತ್ತಮುತ್ತ ನಿಯೋಜಿಸಲಾಗಿದೆ. 4 ಕೆಎಸ್‌ಆರ್‌ಪಿ ತುಕಡಿ, ಹೋಂ ಗಾರ್ಡ್ ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
