- 13 ಸೆಕೆಂಡ್‌ಗಳಲ್ಲೇ ದಾಖಲೆಯ ಗೋಲು!
- ಎರಡು ಗೋಲು ದಾಖಲಿಸಿದ ಗುಂಡೋಗನ್
ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡ ಮ್ಯಾಂಚೆಸ್ಟರ್ ಸಿಟಿ, ಏಳನೇ ಬಾರಿಗೆ ಪ್ರತಿಷ್ಠಿತ ಫುಟ್ಬಾಲ್ ಅಸೋಸಿಯೇಷನ್ ಚಾಲೆಂಜ್ ಕಪ್ (ಎಫ್‌ಎ ಕಪ್) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಲಂಡನ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಸಿಟಿ ತಂಡವು, ಬಲಿಷ್ಠ ಮಾಂಚೆಸ್ಟರ್ ಯುನೈಟೆಡ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿತು. ಕಳೆದ ವಾರವಷ್ಟೇ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಲ್) ಚಾಂಪಿಯನ್ ಪಟ್ಟವನ್ನಲಂಕರಿಸಿದ್ದ ಸಿಟಿ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಗೆಲ್ಲುತ್ತಿರುವ ಎರಡನೇ ಪ್ರಶಸ್ತಿ ಇದಾಗಿದೆ.
13 ಸೆಕೆಂಡ್‌ಗಳಲ್ಲೇ ಗೋಲು!
ಫೈನಲ್ ಪಂದ್ಯ ಪ್ರಾರಂಭವಾಗಿ 13 ಸೆಕೆಂಡ್ ಕಳೆಯುವಷ್ಟರಲ್ಲಿಯೇ ಸಿಟಿ ತಂಡವು ಗೋಲಿನ ಖಾತೆ ತೆರೆದಿತ್ತು. ಸಿಟಿ ನಾಯಕ ಇಲ್ಕೇ ಗುಂಡೋಗನ್ ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟಿದ್ದರು. ಎಫ್‌ಎ ಕಪ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ದಾಖಲಾದ ಗೋಲು ಎಂಬ ದಾಖಲೆಗೂ ಇದು ಪಾತ್ರವಾಯಿತು.
33ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಶೂಟೌಟ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಯುನೈಟೆಡ್ ಮಿಡ್‌ಫೀಲ್ಡರ್ ಬ್ರೂನೋ ಫೆರ್ನಾಂಡಿಸ್, ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು.
ದ್ವಿತಿಯಾರ್ಧದ 51ನೇ ನಿಮಿಷದಲ್ಲಿ ಕೆವಿನ್ ಡಿ ಬ್ರೂಯ್ನ್ ಫ್ರೀ ಕಿಕ್ ಮೂಲಕ ಚೆಂಡನ್ನು ಎಡಗಾಲಿನಿಂದ ಒದ್ದ ಗುಂಡೋಗನ್, ಯುನೈಟೆಡ್ ಇಬ್ಬರು ಡಿಫೆಂಡರ್ ಮತ್ತು ಗೋಲ್ ಕೀಪರ್ ಡೇವಿಡ್ ಡಿ ಗಿಯಾರನ್ನು ವಂಚಿಸಿ ಗೋಲು ಬಲೆಯೊಳಕ್ಕೆ ಸೇರಿಸಲು ಯಶಸ್ವಿಯಾದರು.
ಇದಾದ ಬಳಿಕ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಸಿಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡೂ ಗೋಲನ್ನು ಗಳಿಸಿದ ಗುಂಡೋಗನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮೇ 10, ಶನಿವಾರದಂದು ಇಸ್ತಾನ್‌ಬುಲ್‌ನ ಅಟಾಟುರ್ಕ್ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆಯುವ ಯುಇಎಫ್ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಇಟಾಲಿಯನ್ ಕ್ಲಬ್ ಇಂಟರ್ ಮಿಲಾನ್ ತಂಡವನ್ನು ಪೆಪ್ ಗಾರ್ಡಿಯೋಲ ಸಾರಥ್ಯದ ಮ್ಯಾಂಚೆಸ್ಟರ್ ಸಿಟಿ ಎದುರಿಸಲಿದೆ. ಮೊದಲ ಚಾಂಪಿಯನ್ಸ್ ಲೀಗ್ ಕಿರೀಟದ ನಿರೀಕ್ಷೆಯಲ್ಲಿರುವ ಸಿಟಿ ತಂಡಕ್ಕೆ ಇಂಟರ್ ಸುಲಭ ಸವಾಲಾಗುವ ನಿರೀಕ್ಷೆ ಇದೆ.