ಕಳೆದ ಏಳು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ) ಭಾಗವಾಗಿದ್ದ ಮೊಹಮ್ಮದ್ ಸಿರಾಜ್, ಅವರನ್ನು ಈ ಬಾರಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಖರೀದಿಸಲು ನಿರಾಸಕ್ತಿ ವಹಿಸಿತ್ತು.
ಆರ್‌ಸಿಬಿ ತನ್ನ ವೇಗಿಯನ್ನು ಉಳಿಸಿಕೊಳ್ಳಲು ನಿರಾಸಕ್ತಿ ವಹಿಸಿದ ಬೆನ್ನಲ್ಲೇ, 2025ರ ಗುಜರಾತ್ ಟೈಟನ್ಸ್ ಖರೀದಿ ಮಾಡಿತ್ತು. ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿಸಿದೆ.
ಈ ಬೆನ್ನಲ್ಲೇ ಆರ್‌ಸಿಬಿ ಜೊತೆಗಿನ ದಿನಗಳನ್ನು ನೆನೆದು ತೆಲಂಗಾಣದ ಡಿಸಿಪಿ, ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದು, ಆರ್‌ಸಿಬಿ ಜೊತೆಗೆ ಕಳೆದಿದ್ದ ಕ್ಷಣಗಳನ್ನು ಹಾಗೂ ಅನುಭವವನ್ನು ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಆರ್‌ಸಿಬಿ ಜೊತೆಗೆ ಕಳೆದ ವಿಶೇಷ ಕ್ಷಣಗಳ ಕುರಿತ ವೀಡಿಯೊವನ್ನು ಸಹಿತ, ಜೊತೆಗೆ ಸುದೀರ್ಘವಾದ ಫೋಸ್ಟ್‌ವೊಂದನ್ನು ಬರೆದುಕೊಂಡಿದ್ದಾರೆ.
“ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜೆರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಂಬಿದ ತುಂಬಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜೆರ್ಸಿ, ಆರ್‌ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಇಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ” ಎಂದು ವೇಗಿ ತಿಳಿಸಿದ್ದಾರೆ.

ಮುಂದುವರಿದು, “ಆರ್‌ಸಿಬಿ ಪರ ನಾನು ಮಾಡಿದ ಮೊದಲ ಬಾಲ್ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಪ್ರಯಾಣದಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. ಆರ್‌ಸಿಬಿ ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು” ಎಂದು ಮೊಹಮ್ಮದ್ ಸಿರಾಜ್ ಬರೆದಿದ್ದಾರೆ.
ಸಿರಾಜ್ ವೀಡಿಯೊ ಪೋಸ್ಟ್‌ನಲ್ಲಿ ‘ನಾ ಹಮಾರಾ, ನಾ ತುಮ್ಹಾರಾ ಹುವಾ, ಇಷ್ಕಾ ಕಾ ಯೇ ಸಿತಮ್ ನ ಗನ್ವಾರಾ ಹುವಾ’ ಹಾಡನ್ನು ಬಳಸಿದ್ದಾರೆ.