ಭಾರತ ತಂಡ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನದಲ್ಲಿ ಪಾರಮ್ಯ ಮೆರೆದಿದೆ. ವೇಗಿ ಮೊಹಮದ್ ಸಿರಾಜ್ ಬೌಲಿಂಗ್ ದಾಳಿಗೆ ಡೀನ್ ಎಲ್ಗರ್ ನೇತೃತ್ವದ ಹರಿಣಗಳ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗಿದೆ.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಅಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಲ್ಕನೇ ಓವರ್‌ನಿಂದ ಶುರುವಾದ ಹರಿಣಗಳ ತಂಡದ ವಿಕೆಟ್ ಪತನ 23.2 ಓವರ್‌ಗಳಾಗುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ದಕ್ಷಿಣ ಆಫ್ರಿಕಾ ಪರ ಕೈಲ್ ವೆರ್ರೆನ್ 15 ರನ್ ಗಳಿಸಿದರೆ, ಡೇವಿಡ್ ಬೆಡಿಂಗ್ ಹ್ಯಾಮ್ 12 ರನ್ ಗಳಿಸಿದರು. ಈ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಟಿದರು.
ಉಳಿದ ನಾಲ್ಕು ವಿಕೆಟ್‌ಗಳಲ್ಲಿ 2 ಜಸ್‌ಪ್ರೀತ್ ಬೂಮ್ರಾ ಹಾಗೂ ಉಳಿದ ಎರಡನ್ನು ಮುಖೇಶ್ ಕುಮಾರ್ ಕಿತ್ತು ದಕ್ಷಿಣ ಆಫ್ರಿಕಾ ಇನಿಂಗ್ಸ್ ಮುಕ್ತಾಯ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಟೆಸ್ಟ್ ಕ್ರಿಕೆಟ್ ಮಾದರಿಯ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಹಮದ್ ಸಿರಾಜ್ 15 ರನ್‌ಗಳಿಗೆ 6 ವಿಕೆಟ್ ಕಬಳಿಸಿದರು. ಸಿರಾಜ್ 6 ವಿಕೆಟ್ ಗಳಿಕೆಯು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತೀಯ ಬೌಲರ್ ಪ್ರದರ್ಶಿಸಿದ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ.
ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಾಗೂ ಭಾರತ ತಂಡದ ವಿರುದ್ಧ 55 ರನ್‌ಗಳ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು ಇದೇ ಮೊದಲಾಗಿದೆ.
ಭಾರತಕ್ಕೆ ಆರಂಭಿಕ ಆಘಾತ
ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ರನ್ ಖಾತೆ ತೆರೆಯುವ ಮುನ್ನವೆ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಭೋಜನ ವಿರಾಮದ ಬಳಿಕ ಭಾರತ ತಂಡ 9 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ (37) ಹಾಗೂ ಶುಭಮನ್ ಗಿಲ್ (6) ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇನ್ನು ಭಾರತ ತಂಡ ತನ್ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಮಾಡಿದೆ. ರವಿಚಂದ್ರನ್ ಅಶ್ವಿನ್ ಅವರ ಬದಲಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಆಡಿಸಿದರೆ, ಮತ್ತೊಬ್ಬ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರ ಬದಲು ಮುಖೇಶ್ ಕುಮಾರ್‌ಗೆ ಅವಕಾಶ ನೀಡಲಾಗಿದೆ.