ಇಂದಿನಿಂದ ನಡೆಯುತ್ತಿರುವ ರಣಜಿ ಟ್ರೋಫಿಯ ಮುಂಬೈ ಮತ್ತು ಜಮ್ಮು-ಕಾಶ್ಮೀರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಒಳಗೊಂಡು ಟೀಮ್ ಇಂಡಿಯಾದ ಪರ 7 ಆಟಗಾರರು ಪ್ರತಿನಿಧಿಸಿದ್ದರೂ ಮೊದಲ ಇನಿಂಗ್ಸ್‌ನಲ್ಲಿ 120 ರನ್‌ಗಳಿಗೆ ಆಲೌಟ್ ಆಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಮುಂಬೈ ಮತ್ತು ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ತಂಡದ 11ರ ಬಳಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ 7 ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ 6 ಆಟಗಾರರು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರೆ, ಓರ್ವ ಭಾರತ ತಂಡದ ಭಾಗವಾಗಿದ್ದರು.
ಈ ಮೂಲಕ ರಣಜಿ ಟೂರ್ನಿ ಇತಿಹಾಸದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ 7 ಆಟಗಾರರನ್ನು ಜೊತೆಯಾಗಿ ಕಣಕ್ಕಿಳಿಸಿದ ಕೀರ್ತಿಗೆ ಮುಂಬೈ ತಂಡ ಪಾತ್ರವಾಗಿದೆ.
ಮುಂಬೈ ತಂಡದಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಆಟಗಾರರು: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್
ಈ ಏಳು ಆಟಗಾರರಲ್ಲಿ ತನುಷ್ ಕೋಟ್ಯಾನ್ ಭಾರತ ತಂಡದ ಪರ ಕಣಕ್ಕಿಳಿದಿಲ್ಲ. ಆದಾಗ್ಯೂ ಅವರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದ ಭಾಗವಾಗಿದ್ದರು. ಈ ಮೂಲಕ ಟೀಮ್ ಇಂಡಿಯಾದ ಏಳು ಆಟಗಾರರನ್ನು ಕಣಕ್ಕಿಳಿಸಿ ಮುಂಬೈ ರಣಜಿ ಟೂರ್ನಿಯಲ್ಲಿ ಹೊಸ ಇತಿಹಾಸ ಬರೆದಿದೆ.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು
ಮುಂಬೈ 11ರ ಬಳಗ: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್ ) , ಶಿವಂ ದುಬೆ , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಕರ್ಶ್ ಕೊಠಾರಿ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಜಮ್ಮು ಕಾಶ್ಮೀರ ಬೌಲರ್ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ 47 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ರೋಹಿತ್ ಶರ್ಮಾ(3),ಯಶಸ್ವಿ ಜೈಸ್ವಾಲ್(4),ಶಿವಂ ದುಬೆ(0),ಶ್ರೇಯಸ್ ಅಯ್ಯರ್(11) ರನ್ ಮಾತ್ರ ಗಳಿಸಿ ವಿಫಲರಾದರು.
ಈ ಹಂತದಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 57 ಎಸೆತಗಳನ್ನು ಎದುರಿಸಿದ ಶಾರ್ದೂಲ್ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದಾರೆ. ಈ ಮೂಲಕ ಮುಂಬೈ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 33.2 ಓವರ್‌ಗಳಲ್ಲಿ 120 ರನ್ ಬಾರಿಸಿ ಆಲೌಟ್ ಆಗಿದೆ.
ಜಮ್ಮು ಕಾಶ್ಮೀರ ಪರ 11 ಓವರ್ ಎಸೆದ ಉಮರ್ ನಝೀರ್ 31 ರನ್ ನೀಡಿ 4 ವಿಕೆಟ್ ಪಡೆದರೆ, ಯುದುವೀರ್ ಸಿಂಗ್ 8.2 ಓವರ್‌ಗಳಲ್ಲಿ 31 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಜಮ್ಮು ಮತ್ತು ಕಾಶ್ಮೀರ 40.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.
