ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ವಿದರ್ಭ ವಿರುದ್ಧದ ರಣಜಿ ಫೈನಲ್‌ನಲ್ಲಿ ಮುಶೀರ್ ಖಾನ್ ಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
19 ವರ್ಷ ಮತ್ತು 14 ದಿನಗಳ ವಯಸ್ಸಿನ ಮುಶೀರ್ ಖಾನ್ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ ಮುಂಬೈನ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ತೆಂಡೂಲ್ಕರ್ 1994-95ರಲ್ಲಿ ಪಂಜಾಬ್ ವಿರುದ್ಧ ತನ್ನ 21ನೇ ವಯಸ್ಸಿನಲ್ಲಿ ಬರೆದ ದಾಖಲೆಯನ್ನು ಈಗ ಮುಶೀರ್ ಮುರಿದಿದ್ದಾರೆ. 1994-95ರ ಫೈನಲ್‌ನಲ್ಲಿ ಸಚಿನ್ ಎರಡು ಶತಕಗಳನ್ನು (140 ಮತ್ತು 139) ಗಳಿಸಿದ್ದರಿಂದ ಮುಂಬೈ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಭಾರತದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರರಾಗಿರುವ ಮುಶೀರ್ ಖಾನ್ ತಮ್ಮ ಶತಕದೊಂದಿಗೆ ನಡೆಯುತ್ತಿರುವ ಫೈನಲ್‌ನಲ್ಲಿ ಮುಂಬೈ ತಂಡವನ್ನು ಬಲಿಷ್ಠ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.
ಇನ್ನು ಸಾಲು ಸಾಲು ವೈಫಲ್ಯ ಕಾರಣ ಭಾರತ ಟೆಸ್ಟ್ ತಂಡದಲ್ಲಿ ತನ್ನ ಸ್ಥಾನವನ್ನು ಇತ್ತೀಚೆಗೆ ಕಳೆದುಕೊಂಡ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಬರೀ 7 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಎರಡನೇ ಇನಿಂಗ್ಸ್‌ನಲ್ಲಿ 62 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಕಳೆದ 14 ತಿಂಗಳಲ್ಲಿ ಮೊದಲ 50ಕ್ಕೂ ಅಧಿಕ ಸ್ಕೋರ್ ಅನ್ನು ಶ್ರೇಯಸ್ ಅಯ್ಯರ್ ಪಡೆದಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ವಿದರ್ಭವನ್ನು ಕೇವಲ 105 ರನ್‌ಗಳಿಗೆ ಆಲೌಟ್ ಮಾಡುವ ಮೊದಲು ಮುಂಬೈ 224 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 418 ಸ್ಟೋರ್ ಗಳಿಸಿದೆ. ಈ ವರದಿಯನ್ನು ಪ್ರಕಟಿಸುವ ಸಮಯದಲ್ಲಿ ವಿದರ್ಭ ಎರಡನೇ ಇನ್ನಿಂಗ್ಸ್‌ನಲ್ಲಿ 10/0 ಸ್ಕೋರ್ ಗಳಿಸಿದ್ದು, 538 ಟಾರ್ಗೆಟ್ ಆಗಿದೆ.