ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ(ನಾಡಾ) ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರಿಗೆ ಎರಡನೇ ಬಾರಿ ಅಮಾನತುಗೊಳಿಸಿದೆ. ಆರೋಪದ ಬಗ್ಗೆ ನೋಟಿಸ್ ನೀಡದ ಕಾರಣ ಉದ್ದೀಪನ ಮದ್ದು ತಡೆ ಶಿಸ್ತು ಸಮಿತಿ(ಎಡಿಡಿಪಿ) ಈ ಹಿಂದೆ ಪುನಿಯಾ ಅವರ ಅಮಾನತನ್ನು ಹಿಂಪಡೆದಿತ್ತು.
ಮಾರ್ಚ್ 10 ರಂದು ಸೋನಾಪೇಟೆಯಲ್ಲಿ ನಡೆದ ಒಲಿಂಪಿಕ್ಸ್ ಪೂರ್ವಭಾವಿ ಆಯ್ಕೆಯಲ್ಲಿ ಮೂತ್ರ ಮಾದರಿ ನೀಡದ ಕಾರಣ ನಾಡಾ ಏ.23 ರಂದು ಟೊಕೊಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರನ್ನು ಅಮಾನತುಗೊಳಿಸಲಾಗಿತ್ತು. ಅದೇ ರೀತಿ ವಿಶ್ವ ಕುಸ್ತಿ ಆಡಳಿತ ಮಂಡಳಿ ಕೂಡ ಅಮಾನತುನ್ನು ಊರ್ಜಿತಗೊಳಿಸಿತ್ತು.
ನಾಡಾ ತಮಗೆ ನೋಟಿಸ್ ನೀಡುವ ತನಕ ಅಮಾನತನ್ನು ತಡೆಹಿಡಿಯಬೇಕೆಂದು ಮೇ 31ರಂದು ನಾಡಾದ ಎಡಿಡಿಪಿ ಸಮಿತಿಗೆ ಪುನಿಯಾ ಮನವಿ ಮಾಡಿಕೊಂಡಿದ್ದರು. ನಾಡಾ ಇಂದು ನೋಟಿಸ್ ಜಾರಿಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
“2021ರ ರಾಷ್ಟ್ರೀಯ ಉದ್ದೀಪನ ಮದ್ದು ನಿಯಮಗಳ ವಿಧಿ 2.3ಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಿಮಗೆ ಔಪಚಾರಿಕ ನೋಟಿಸ್ ನೀಡಲಾಗುತ್ತಿದ್ದು, ನಿಮ್ಮನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತಿದೆ” ಎಂದು ನಾಡಾ ನೋಟಿಸ್‌ನಲ್ಲಿ ತಿಳಿಸಿದೆ.
ವಿಚಾರಣೆಯನ್ನು ವಿನಂತಿಸಲು ಅಥವಾ ಆರೋಪವನ್ನು ಒಪ್ಪಿಕೊಳ್ಳಲು ಬಜರಂಗ್ ಅವರಿಗೆ ಜುಲೈ 11ರವರೆಗೂ ಸಮಯಾವಕಾಶ ನೀಡಲಾಗಿದೆ.
“ಉದ್ದೀಪನೆ ಪರೀಕ್ಷೆ ಉದ್ದೇಶಕ್ಕಾಗಿ ಅಗತ್ಯವಾದ ಮೂತ್ರ ಮಾದರಿಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿದ್ದಾರೆ. ಅಧಿಕಾರಿಗಳು ಹಲವು ಮನವಿಗಳ ನಂತರವೂ ನೀವು ಮೂತ್ರ ಮಾದರಿಗಳನ್ನು ನೀಡಲು ನಿರಾಕರಿಸಿದ್ದೀರಿ. ಮೂತ್ರ ಮಾದರಿಗಾಗಿ ಅವಧಿ ಮೀರಿದ ಕಿಟ್‌ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಗಳಿಗೂ ಸಂಬಂಧಿಸಿದ ಅಧಿಕಾರಿಗಳು ವಿವರವಾಗಿ ಉತ್ತರ ನೀಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ನಾಡಾ ಕ್ರಮ ಕೈಗೊಂಡಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
