ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಇಂದಿನಿಂದ ಅಡಿಲೇಡ್ನ ಓವಲ್ನಲ್ಲಿ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಗೆದ್ದಿರುವ ಭಾರತ ಇದೀಗ ಪಿಂಕ್ ಬಾಲ್ ಟೆಸ್ಟ್ ಮೇಲೆ ಕಣ್ಣಿಟ್ಟಿದ್ದು, ಸರಣಿ ಮುನ್ನಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ, ಕೈ ಬೆರಳ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್ ಕೂಡ ಚೇತರಿಸಿಕೊಂಡು ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇದರಿಂದಾಗಿ ಈ ಇಬ್ಬರು ಆಟಗಾರರು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಮೊದಲ ಪಂದ್ಯವನ್ನಾಡಿದ್ದ ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೇಲ್ 2ನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ.
ಜೈಸ್ವಾಲ್ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದಕ್ಕೆ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ. ಅಡಿಲೇಡ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡನೇ ಟೆಸ್ಟ್ನಲ್ಲಿ ನಾನು ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದಂತೆ ಕೆ.ಎಲ್.ರಾಹುಲ್ ಮತ್ತು ಜೈಸ್ವಾಲ್ ಆರಂಭಿಕರಾಗಿರಲಿದ್ದಾರೆ. ಪಿಂಕ್ ಬಾಲ್ ಟೆಸ್ಟ್ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಮಿಂಚಿದರೆ ತಂಡ ಒಳ್ಳೆಯ ಸ್ಕೋರ್ ಕಲೆಹಾಕಬಹುದು. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ರಾಹುಲ್ ಆಟಕ್ಕೆ ಹತ್ತು ವರ್ಷ ಮತ್ತು ಪಿಂಕ್ ಬಾಲ್ ಟೆಸ್ಟ್
ಅಡಿಲೇಡ್ ಓವಲ್ ಭಾರತದ ಪಾಲಿಗೆ ಸೋಲುಗೆಲುವಿನ ಕಣವಾಗಿದೆ. 2001ರಿಂದೀಚೆ ಭಾರತ ಇಲ್ಲಿ ಎರಡು ಟೆಸ್ಟ್ಗಳನ್ನು ಗೆದ್ದು ಪ್ರವಾಸಿ ತಂಡಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿದೆ. ಇದೇ ಅವಧಿಯಲ್ಲಿ ಆಸ್ಟ್ರೇಲಿಯಾ ಇಲ್ಲಿ ಮೂರು ಪಂದ್ಯಗಳನ್ನು ಮಾತ್ರ ಸೋತಿದೆ.
ಭಾರತ ಪಿಂಕ್ಬಾಲ್ ಟೆಸ್ಟ್ಗಳಲ್ಲಿ ಆಡಿದ ನಾಲ್ಕರಲ್ಲಿ ಮೂರು ಗೆದ್ದು ಉತ್ತಮ ಸಾಧನೆ ದಾಖಲಿಸಿದೆ. ಆದರೆ ಆಸ್ಟ್ರೇಲಿಯಾದ ದಾಖಲೆಯೂ ಅದಕ್ಕಿಂತ ಉತ್ತಮವಾಗಿದೆ. 12 ಟೆಸ್ಟ್ ಪಂದ್ಯಗಳಲ್ಲಿ 11 ರಲ್ಲಿ ಗೆದ್ದಿದೆ. ಆ ಏಕೈಕ ಸೋಲನ್ನು ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ಎದುರು ಅನುಭವಿಸಿತ್ತು. ಭಾರತಕ್ಕೆ ಸ್ವಲ್ಪ ಆತಂಕದ ವಿಷಯವೆಂದರೆ ಅಡಿಲೇಡ್ನಲ್ಲಿ ಆಡಿರುವ ಪಿಂಕ್ಬಾಲ್ ಟೆಸ್ಟ್ಗಳಲ್ಲಿ ಆತಿಥೇಯರು ಎಲ್ಲವನ್ನೂ ಗೆದ್ದಿದ್ದಾರೆ.
ಇದೇ ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ 2003ರ ಸರಣಿಯಲ್ಲಿ ಅತಿ ಶ್ರೇಷ್ಠ ಇನಿಂಗ್ಸ್ (233) ಕಟ್ಟಿದ್ದರು. ಅದೇ ಪಂದ್ಯದಲ್ಲಿ ಅಜೇಯ 72 ರನ್ಗಳೊಂದಿಗೆ ಭಾರತ ಗುರಿಯನ್ನು ಬೆನ್ನಟ್ಟುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ವಿರಾಟ್ ಕೊಹ್ಲಿ ಇಲ್ಲಿ ಗಳಿಸಿದ್ದ ಶತಕಗಳು (115 ಮತ್ತು 141) ಭಾರತವನ್ನು ಬಹುತೇಕ ಗೆಲುವಿನ ಹಳಿಗೆ ತಲುಪಿಸಿದ್ದವು.
ಆದರೆ ಇದೇ ಕ್ರೀಡಾಂಗಣದ ಹಗಲು ರಾತ್ರಿ ಟೆಸ್ಟ್ನಲ್ಲಿ ಭಾರತಕ್ಕೆ ಹಿಂದೆಂದೂ ಅನುಭವಿಸದ ಮುಖಭಂಗ ಎದುರಾಯಿತು. ಟೆಸ್ಟ್ ಇತಿಹಾಸದಲ್ಲೇ ತನ್ನ ಅತಿ ಕಡಿಮೆ ಮೊತ್ತವಾದ 36 ರನ್ಗೆ ಉರುಳಿದ್ದು ಇಲ್ಲಿಯೇ. ಆ ಟೆಸ್ಟ್ ನಂತರ ಭಾರತ ಅಮೋಘವಾಗಿ ತಿರುಗಿಬಿದ್ದು ಸರಣಿ ಗೆದ್ದಿದ್ದು ಇತಿಹಾಸ.
ಪಂದ್ಯವಾಡುವ ಉಭಯ ತಂಡಗಳು
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ನಥಾನ್ ಮೆಕ್ಸ್ವೀನಿ, ಟ್ರಾವಿಸ್ ಹೆಡ್, ಸ್ವೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ನಥಾನ್ ಲಯನ್.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬೂಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
ಪಂದ್ಯ ಆರಂಭ: ಬೆಳಿಗ್ಗೆ 9.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್