- ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿ
- ಇದೇ ಮೊದಲ ಬಾರಿಗೆ ಪ್ರಧಾನ ಸುತ್ತಿಗೇರಿದ ನೇಪಾಳ
ಎಸಿಸಿ ಪ್ರೀಮಿಯರ್ ಕಪ್‌ನ ಫೈನಲ್ ಪಂದ್ಯದಲ್ಲಿ ಯುಎಇ ತಂಡವನ್ನು ಮಣಿಸಿದ ನೇಪಾಳ, ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.
ನೇಪಾಳದ ಕೀರ್ತಿಪುರದಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಯುಎಇಯನ್ನು ಏಳು ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ನೇಪಾಳ, ಇದೇ ಮೊದಲ ಬಾರಿಗೆ ಏಷ್ಯಾ ಕಪ್ ಟೂರ್ನಿಯ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಈ ಗೆಲುವಿನೊಂದಿಗೆ ನೇಪಾಳ ತಂಡ, ಏಷ್ಯಾ ಕಪ್ 2023 ಟೂರ್ನಿಯ ‘ಎ’ ಗುಂಪಿನಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನದ ಜೊತೆಗೆ ಸ್ಥಾನ ಪಡೆದುಕೊಂಡಿದೆ.
ಏಷ್ಯಾ ಕಪ್ 2023 ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
ಮಳೆ ಕಾರಣ 2 ದಿನಗಳ ಕಾಲ ನಡೆಸಲಾದ ಫೈನಲ್ ಪಂದ್ಯದಲ್ಲಿ ರೋಹಿತ್ ಪೌದೆಲ್ ಸಾರಥ್ಯದ ನೇಪಾಳ ತಂಡ ಸ್ಮರಣೀಯ ಜಯ ತನ್ನದಾಗಿಸಿಕೊಂಡಿದೆ.
ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ತಂಡವು ಸೋಮವಾರ 9 ವಿಕೆಟ್ ನಷ್ಟದಲ್ಲಿ 106 ರನ್ ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ, ಫೈನಲ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು.
ಮಂಗಳವಾರ ಪಂದ್ಯ ಪುನರಾರಂಭವಾಗುತ್ತಿದ್ದಂತೆ ನೇಪಾಳದ ಬೌಲರ್ ಲಲಿತ್ ರಾಜ್ಬನ್ಶಿ, ಯುಎಇಯ ಕೊನೆಯ ವಿಕೆಟ್ ಕಿತ್ತರು. ಆ ಮೂಲಕ ಯುಎಇ 33.1 ಓವರ್‌ನಲ್ಲಿ 117 ರನ್ಗೆ ಸರ್ವಪತನ ಕಂಡಿತು.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಚೆನ್ನೈ ವಿರುದ್ಧ ಅಂತಿಮ ಎಸೆತದಲ್ಲಿ ಗೆದ್ದ ಪಂಜಾಬ್!
ಭರ್ಜರಿ ಫಾರ್ಮ್‌ನಲ್ಲಿರುವ ಯುಎಇಯ ಅನುಭವಿ ಬ್ಯಾಟರ್ ಆಸಿಫ್ ಖಾನ್, ಫೈನಲ್ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸಿದರು. ಎದುರಿಸಿದ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿ ತಂಡದ ಮೊತ್ತವನ್ನು ಮೂರಂಕಿಯ ಗಡಿ ದಾಟಿಸಿದರು.
ನೇಪಾಳದ ಪರ ಲಲಿತ್ ರಾಜ್ಬನ್ಶಿ 7.1 ಓವರ್‌ನಲ್ಲಿ ಕೇವಲ 14 ರನ್ ನೀಡಿ 4 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದರು.
ಅಲ್ಪ ಮೊತ್ತದ ಗುರಿ ಬೆನ್ನತ್ತಿದ ನೇಪಾಳ ತಂಡ ಆರಂಭದಲ್ಲೇ ನಾಯಕ ಕುಶಾಲ್ ಭುರ್ಟೆಲ್ (1), ಆಸಿಫ್ ಶೇಖ್ (8) ಮತ್ತು ನಾಯಕ ರೋಹಿತ್ ಪೌಡೆಲ್ (1) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
8 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 22 ರನ್ ಕಲೆಹಾಕಿದ್ದ ತಂಡಕ್ಕೆ ಗುಲ್ಷನ್ ಮತ್ತು ಭೀಮ್ ಶಾರ್ಕಿ ಆಸರೆಯಾದರು. 4ನೇ ವಿಕೆಟ್‌ಗೆ 96 ರನ್ ಜೊತೆಯಾಟವಾಡಿದ ಈ ಜೋಡಿ 30ನೇ ಓವರ್‌ನಲ್ಲಿ ತಂಡವನ್ನು ಜಯದ ದಡ ಮುಟ್ಟಿಸಿತು.
17 ವರ್ಷ ವಯಸ್ಸಿನ ಗುಲ್ಶನ್ ಝಾ, 84 ಎಸೆತಗಳಲ್ಲಿ 67 ರನ್ ಭೀಮ್ 72 ಎಸೆತಗಳಲ್ಲಿ 36 ರನ್‌ಗಳಿಸಿ ಅಜೇಯರಾಗುಳಿದರು. ಯುಎಇ ಪರ ರೋಹನ್ ಮುಸ್ತಫಾ ಎರಡು ವಿಕೆಟ್ ಪಡೆದರು