ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸುದ್ದಿಯಾಗಿದ್ದ ನೆದರ್‌ಲ್ಯಾಂಡ್ಸ್ ತಂಡ, ಇಂದು(ಶನಿವಾರ) ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಏಕದಿನ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ನೆದರ್‌ಲ್ಯಾಂಡ್ಸ್ ತಂಡ 87 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್‌ಲ್ಯಾಂಡ್ಸ್ ತಂಡ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ನಿರ್ಣಾಯಕ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 229 ರನ್ ಗಳಿಗೆ ಆಲೌಟ್ ಆಗುವ ಮೂಲಕ, ಬಾಂಗ್ಲಾದೇಶ ತಂಡಕ್ಕೆ 230 ರನ್‌ಗಳ ಸುಲಭ ಗುರಿ ನೀಡಿತ್ತು.
Netherlands pulled off yet another stellar win in #CWC23 as they beat Bangladesh at Eden Gardens 🤩#NEDvBAN 📝: https://t.co/GrSfCMbzj2 pic.twitter.com/KExeIXi226
— ICC (@ICC) October 28, 2023
ಆದರೆ ಈ ಸಾಧಾರಣ ಗುರಿಯನ್ನು ತಲುಪುವಲ್ಲಿ ಎಡವಿದ ಶಾಕಿಬುಲ್ ಹಸನ್ ನೇತೃತ್ವದ ಬಾಂಗ್ಲಾದೇಶ, 42.2 ಓವರ್‌ಗಳಲ್ಲಿ 142 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಬಾಂಗ್ಲಾದೇಶದ ಪರ ಬ್ಯಾಟಿಂಗ್ ಆರಂಭಿಸಿದ್ದ ಲಿಟ್ಟನ್ ದಾಸ್ ಹಾಗೂ ತಂಝೀದ್ ಹಸನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲನೇ ವಿಕೆಟ್ 19 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಆ ಬಳಿಕ ಕ್ರೀಸ್‌ಗೆ ಬಂದ ಹಸನ್ ಮೀರಾಝ್ ಸ್ವಲ್ಪ ಆಟವಾಡಿದರಾದರೂ 35 ರನ್ ಗಳಿಸಿ ಔಟಾದರು. ಇದು ಬಾಂಗ್ಲಾ ಪರ ಬ್ಯಾಟರ್‌ನಿಂದ ದಾಖಲಾದ ಅತಿ ಹೊಚ್ಚು ರನ್. ಉಳಿದಂತೆ ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಬೌಲಿಂಗ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡದ ಪರ ಪೌಲ್ ವ್ಯಾನ್ ಮೀಕೆರೆನ್ ರನ್ 23ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಬಾಸ್ ಡಿ ಲೀಡ್ 25ಕ್ಕೆ 2, ಆರ್ಯನ್ ದತ್ತ್, ವ್ಯಾನ್ ಬೀಕ್, ಕಾಲಿನ್ ಆಕ್ರೊಮೆನ್ ತಲಾ ಒಂದೊಂದು ವಿಕೆಟ್ ಪಡೆದರು.
Delivering Uber Eats in October 2020 to delivering match winning spells and sealing the POTM award in October 2023.
– The inspirational journey of Paul Van Meekeren…!!! pic.twitter.com/tTlOG98mM7
— Mufaddal Vohra (@mufaddal_vohra) October 28, 2023
ಬೌಲಿಂಗ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡದ ಪರ 7.2 ಓವರ್ ಎಸೆದು 4 ವಿಕೆಟ್ ಪಡೆದು ಮಿಂಚಿದ ಪೌಲ್ ವ್ಯಾನ್ ಮೀಕೆರೆನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನೆದರ್‌ಲ್ಯಾಂಡ್ಸ್ ತಂಡಕ್ಕೆ ಆಸರೆಯಾಗಿದ್ದ ನಾಯಕ ಸ್ಕಾಟ್ ಎಡ್ವರ್ಡ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್‌ಲ್ಯಾಂಡ್ಸ್ ತಂಡ ಆರಂಭದಲ್ಲೇ ಕುಸಿತ ಕಂಡಿತ್ತು. ಆ ನಂತರ ನೆದರ್‌ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಕುಸಿದಿದ್ದ ತಂಡಕ್ಕೆ ಆಸರೆಯಾದರು. 89 ಎಸೆತಗಳಿಂದ 6 ಬೌಂಡರಿ ಮೂಲಕ 68 ರನ್ ಬಾರಿಸಿದರು. ಇನ್ನು ಬಾಸ್ ಡಿ ಲೀಡ್ 32 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 17 ರನ್ ಗಳಿಸಿದ್ದರು. ಕೊನೆಗೆ ನಿಗದಿತ 50 ಓವರ್‌ಗಳಲ್ಲಿ 229 ರನ್‌ಗಳಿಗೆ ಸರ್ವಪತನ ಕಂಡಿತ್ತು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಮುಸ್ತಾಫಿಝುರ್ ರೆಹಮಾನ್ 10 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಶರೀಫುಲ್ ಇಸ್ಲಾಂ 10 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಕಬಳಿಸಿದರು.
ತಸ್ಕಿನ್ ಅಹ್ಮದ್ 9 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಶಕೀಬ್ ಅಲ್ ಹಸನ್ 10 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಮತ್ತು ಮಹೇದಿ ಹಸನ್ 7 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದಿದ್ದರು.