2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ 15 ಸದಸ್ಯರ ನ್ಯೂಜಿಲೆಂಡ್ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡಿಗ ರಚಿನ್ ರವೀಂದ್ರ ಸ್ಥಾನ ಪಡೆದಿದ್ದಾರೆ.
ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಯುವ ಆಲ್ರೌಂಡರ್ ಕನ್ನಡಿಗ, ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರಿಗೆ ಸ್ಥಾನ ನೀಡಲಾಗಿದೆ. ವಿಶ್ವ ಕಪ್ 15ರ ಬಳಗದಲ್ಲಿ ಭಾರತ ಮೂಲದ ಮತ್ತೊಬ್ಬ ಬ್ಯಾಟರ್ ಇಶ್ ಸೋಧಿ ಅವರು ಕೂಡ ಅವಕಾಶ ಪಡೆದಿದ್ದಾರೆ.
ಐಪಿಎಲ್ 2023 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಕೇನ್ ವಿಲಿಯಮ್ಸನ್ ಗಾಯದ ಸಮಸ್ಯೆ ಎದುರಿಸಿದರು. ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಬೌಂಡರಿ ಗೆರೆ ಬಳಿ ಸಿಕ್ಸರ್ ತಡೆಯುವ ಪ್ರಯತ್ನದಲ್ಲಿ ಕೇನ್ ತಮ್ಮ ಮಂಡಿಗೆ ಬಲವಾದ ಪೆಟ್ಟು ಮಾಡಿಕೊಂಡರು. ಬಳಿಕ ಗಾಯದ ಸಮಸ್ಯೆ ನಿವಾರಣೆಗೆ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು. ಇದೀಗ ಕೇನ್ ಸಂಪೂರ್ಣ ಚೇತರಿಸಿಕೊಂಡು ತಂಡವನ್ನು ಮುನ್ನಡೆಸಲಿದ್ದಾರೆ.
ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್, ಕಿವೀಸ್ ತಂಡದ ವೇಗದ ಬೌಲಿಂಗ್ ಪಡೆಯ ಪ್ರಮುಖ ಬೌಲರ್ ಆಗಿದ್ದಾರೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿ ವಿಲ್ ಯಂಗ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅನುಭವಿ ಆಲ್ರೌಂಡರ್ ಜೇಮ್ಸ್ ನೀಶಮ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಾರ್ಕ್ ಚಾಂಪ್ಮನ್, ಡೆವೊನ್ ಕಾನ್ವೇ, ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಫ್ಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಕಿವೀಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಜಿಲೆಂಡ್ ತಂಡವು ಸೆಪ್ಟೆಂಬರ್ 29ರಂದು ಪಾಕಿಸ್ತಾನ ಎದುರು ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇದಾದ ಬಳಿಕ ಅಕ್ಟೋಬರ್ 05ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಮೊದಲ ಪಂದ್ಯಕ್ಕೆ ಸಜ್ಜಾಗಲಿದೆ.
2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೂಪರ್ ಓವರ್ ಹಾಗೂ ಬೌಂಡರಿ ಕೌಂಟ್ ನಿಯಮದನ್ವಯ ಸೋಲು ಅನುಭವಿಸಿತ್ತು.
ಸಂಪೂರ್ಣ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಆಯೋಜನೆ ಆಗಲಿದೆ.
ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಹಾಳು ಮಾಡಲು ಭ್ರಷ್ಟ ಜಯ್ ಶಾ ಸಾಕು ಎಂದಿದ್ದ ಮಾಜಿ ಕ್ರಿಕೆಟಿಗ ವೆಂಕಿ: ಕೆಲವೇ ನಿಮಿಷದಲ್ಲಿ ಪೋಸ್ಟ್ ಡಿಲೀಟ್!
ಕನ್ನಡಿಗ ರಚಿನ್ ರವೀಂದ್ರ
ವಿಶ್ವಕಪ್ ಸರಣಿಗೆ ಆಯ್ಕೆಯಾದ ಆಟಗಾರರಲ್ಲಿ 23 ವರ್ಷದ ಕನ್ನಡಿಗ ರಚಿನ್ ರವೀಂದ್ರ ಕೂಡ ಇರುವುದು ವಿಶೇಷ. ಈ ಹಿಂದೆಯೇ ನ್ಯೂಜಿಲೆಂಡ್ ತಂಡದ ಪದಾರ್ಪಣೆ ಮಾಡಿದ ರಚಿನ್ ಅವರ ಪೋಷಕರು ಬೆಂಗಳೂರು ಮೂಲದವರು. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ 1990 ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಅಲ್ಲಿನ ಪೌರತ್ವ ಪಡೆಯುವ ಮೂಲಕ ಅಲ್ಲಿಯೇ ನೆಲೆಸಿದ್ದರು.
ರಚಿನ್ ರವೀಂದ್ರ 2016 ರ ಹಾಗೂ 2018ರ ಅಂಡರ್-19 ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ಮೂಲಕ ನ್ಯೂಜಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅಲ್ಲದೆ 2021 ರಲ್ಲಿ ನ್ಯೂಜಿಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೋನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್ (ವಿಕೆಟ್ಕೀಪರ್, ಉಪನಾಯಕ), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಢಿ, ಟಿಮ್ ಸೌಥೀ ಮತ್ತು ವಿಲ್ ಯಂಗ್.