ಅಪ್ಘಾನಿಸ್ತಾನ ತಂಡ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಹೊಸ ಇತಿಹಾಸ ರಚಿಸಿದೆ. ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಳ್ಳುವ ಮೂಲಕ ಅಪ್ಘಾನಿಸ್ತಾನ ಚೊಚ್ಚಲ ಸರಣಿ ಗೆಲುವಿನ ಸಂಭ್ರವನ್ನಾಚರಿಸಿದೆ.
ಪಾಕಿಸ್ತಾನ ಸೇರಿದಂತೆ ಐಸಿಸಿ ಶ್ರೇಯಾಂಕದ ಅಗ್ರ ಆರು ಸ್ಥಾನಗಳಲ್ಲಿರುವ ತಂಡಗಳ ವಿರುದ್ಧ ಅಪ್ಘಾನಿಸ್ತಾನ ಇದೇ ಮೊದಲ ಬಾರಿಗೆ ಕ್ರಿಕೆಟ್ ಸರಣಿ ಗೆದ್ದು ಬೀಗಿದೆ.
ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಅಫ್ಘಾನ್ ಪಡೆ, ಸೋಮವಾರ ನಡೆದ ಮೂರನೇ ಪಂದ್ಯದಲ್ಲಿ ಪಾಕ್ ತಂಡಕ್ಕೆ ತಲೆಬಾಗಿದೆ. ಆ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾಕಿಸ್ತಾನ ಪಾರಾಗಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಯುವ ಆಟಗಾರರನ್ನು ಒಳಗೊಂಡ ಪಾಕಿಸ್ತಾನ 66 ರನ್‌ಗಳ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕ್, 7 ವಿಕೆಟ್ ನಷ್ಟದಲ್ಲಿ 182 ರನ್ ಗಳಿಸಿತ್ತು. ಕಠಿಣ ಗುರಿಯನ್ನು ಬೆನ್ನಟ್ಟುವ ವೇಳೆ ರಶೀದ್ ಖಾನ್ ಬಳಗ 18.4 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನ ಕಂಡಿತು. ಇಹ್ಸಾನುಲ್ಲಾ ಮತ್ತು ಶಾದಾಬ್ ಖಾನ್ ತಲಾ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಅಪ್ಘಾನಿಸ್ತಾನದ ಮುಹಮ್ಮದ್ ನಬಿ ಸರಣಿಶ್ರೇಷ್ಠ ಪ್ರಶಸ್ತಿ ಮತ್ತು ಪಾಕಿಸ್ತಾನದ ಶಾದಾಬ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.