ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವು ಸದ್ಯ ಬಿಜೆಪಿ ಶಾಸಕ ಮತ್ತು ಪೊಲೀಸರ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿದೆ. ತಮ್ಮ ಮಗನ ಜೀಪ್ ಅಪಘಾತದ ಬಳಿಕ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದು, ತೀವ್ರ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಪ್ರೀತಮ್ ಲೋಧಿ ಅವರ ಮಗ ದಿನೇಶ್ ಲೋಧಿ ಕರೇರಾದಲ್ಲಿ ವೇಗವಾಗಿ ಜೀಪ್ (ಥಾರ್) ಚಲಾಯಿಸಿದ್ದು ಅಪಘಾತದಲ್ಲಿ ಐವರು ಗಾಯಗೊಂಡಿದ್ದಾರೆ. ಏಪ್ರಿಲ್ 16ರಂದು ಅಪಘಾತ ನಡೆದಿದೆ. ಈ ಅಪಘಾತದ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪ್ರೀತಮ್ ಲೋಧಿ, “ಒಬ್ಬ ಶಾಸಕನಿಗೆ, ಮಗ ಅಥವಾ ಕುಟುಂಬ ಆದ್ಯತೆಯಾಗಲ್ಲ. ಜನರೇ ಅತ್ಯುನ್ನತ. ಕರೇರಾದಲ್ಲಿ ಗಾಯಗೊಂಡವರಿಗೆ ಪೊಲೀಸ್ ಆಡಳಿತವು ನ್ಯಾಯವನ್ನು ನೀಡಬೇಕಾಗುತ್ತದೆ” ಎಂದು ಹೇಳಿದ್ದರು. ಈ ಹೇಳಿಕೆಯು ಜನಮನ್ನಣೆಗೆ ಕಾರಣವಾಗಿತ್ತು. ಆದರೆ ಶಾಸಕರು ಈಗ ಯುಟರ್ನ್ ಹೊಡೆದಿದ್ದು, ಪೊಲೀಸರಿಗೇ ಬೆದರಿಕೆ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣ: ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ
ಕರೇರಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಆಯುಷ್ ಜಖರ್ ಅವರಿಗೆ ಶಾಸಕ ಲೋಧಿ ನೇರ ಎಚ್ಚರಿಕೆ ನೀಡಿದ್ದಾರೆ. “ಕರೇರಾ SDOP ಹೇಳಿದ್ದನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮಗ ಮತ್ತೆ ಇಲ್ಲಿ ಕಾಣಬಾರದು ಎಂದು ಅಧಿಕಾರಿ ಎಚ್ಚರಿಸಿದ್ದಾರೆ. ಕರೇರಾ ನಿಮ್ಮ ‘ಅಪ್ಪ’ನಿಗೆ ಸೇರಿದ್ದೇ? ಎಂದು ನಾನು ಅಧಿಕಾರಿಯನ್ನು ಕೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ, “ಸಾಮಾನ್ಯವಾಗಿ ನಾನು ಈ ರೀತಿ ಮಾತನಾಡಲ್ಲ. ಆದರೆ ಈಗ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಮಗ ಮತ್ತೆ ಕರೇರಾಗೆ ಬರುತ್ತಾನೆ. ಅವನು ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ. ನಿಮ್ಮ ‘ಅಪ್ಪ’ನಿಗೆ ಧೈರ್ಯವಿದ್ದರೆ, ಅವನನ್ನು ತಡೆಯಲು ಪ್ರಯತ್ನಿಸಲಿ” ಎಂದಿದ್ದಾರೆ.
ಹಾಗೆಯೇ ತನಿಖೆ ನಡೆಸುವವರಿಗೆ ಬಹಿರಂಗವಾಗಿ ಸವಾಲು ಹಾಕಿರುವ ಶಾಸಕರು, ಪ್ರತೀಕಾರದ ಎಚ್ಚರಿಕೆಯನ್ನು ನೀಡಿದ್ದಾರೆ. “ನಮ್ಮ ಇತಿಹಾಸವನ್ನು ಒಮ್ಮೆ ತಿಳಿಯಿರಿ ಎಂದು ನಾನು SDOPಗೆ ಹೇಳಲು ಬಯಸುತ್ತೇನೆ. ನೀವು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೆ, ಅನಗತ್ಯ ಒತ್ತಡ ಹೇರಿದರೆ ಅಥವಾ ತನಿಖೆ ನಡೆಸಿದರೆ, ನಾನು ಅದನ್ನು ಸಹಿಸಲ್ಲ. ನಾವು ಖಂಡಿತವಾಗಿಯೂ ನಿಮಗೆ ಸೂಕ್ತ ಉತ್ತರವನ್ನು ನೀಡುತ್ತೇವೆ. ಅಂತಹ ಅಧಿಕಾರಿಗಳಿಗೆ, ನಿಮ್ಮ ಮಿತಿಯೊಳಗೆ ಇರಿ; ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇರಿ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ರಾಜಕೀಯವನ್ನು ಎಳೆದು ತಂದಿರುವ ಬಿಜೆಪಿ ಶಾಸಕರು, ಕಾಂಗ್ರೆಸ್ ಮಾಡುವಂತೆಯೇ ಈ ಅಪಘಾತ ಪ್ರಕರಣವನ್ನು ಪೊಲೀಸರು ಉತ್ಪ್ರೇಕ್ಷೆ ಮಾಡಿದ್ದಾರೆ. ಹಿಂದಿನ ಅನೇಕ ಅಪಘಾತಗಳಲ್ಲಿ, ಪ್ರಾಥಮಿಕ ತನಿಖೆಗಳನ್ನು ಸಹ ನಡೆಸಲಾಗಿಲ್ಲ ಎಂದು ದೂರಿದರು.
ಅಪಘಾತದಲ್ಲಿ ಐವರು ಸಾವು
ಏಪ್ರಿಲ್ 16ರಂದು ಬೆಳಿಗ್ಗೆ 7:30 ರ ಸುಮಾರಿಗೆ, ಸಂಜಯ್ ಪರಿಹಾರ್, ಆಶಿಶ್ ಪರಿಹಾರ್ ಮತ್ತು ಅನ್ಶುಲ್ ಪರಿಹಾರ್ ಎಂಬವರು ತಹಸಿಲ್ ಕಚೇರಿಯ ಕಡೆಗೆ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಅದೇ ರಸ್ತೆಯಲ್ಲಿ ಸೀತಾ ವರ್ಮಾ ಮತ್ತು ಪೂಜಾ ಸೋನಿ ಎಂಬ ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದರು. ಎಫ್‌ಐಆರ್ ಪ್ರಕಾರ, ದಿನೇಶ್ ಲೋಧಿ ಅತಿ ವೇಗದಲ್ಲಿ ಜೀಪ್ ಚಲಾಯಿಸುತ್ತಾ ಅದೇ ರಸ್ತೆಯಲ್ಲಿ ಸಾಗಿದ್ದಾರೆ. ಮೊದಲು ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಐವರೂ ಗಾಯಗೊಂಡಿದ್ದಾರೆ.
ವಿವಾದಗಳ ಲೋಧಿ
ತಂದೆ, ಮಗ ಇಬ್ಬರೂ ಈ ಹಿಂದಿನಿಂದಲೂ ವಿವಾದಗಳನ್ನು ಮಾಡುತ್ತಲೇ ಬಂದಿದ್ದಾರೆ. ದಿನೇಶ್ ಲೋಧಿ ಈ ಹಿಂದೆ ಅನೇಕ ವಿವಾದಗಳಲ್ಲಿ ಸಿಲುಕಿದ್ದರು. 2023ರಲ್ಲಿ, ಒಬ್ಬ ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. 2024ರಲ್ಲಿ, ಗ್ವಾಲಿಯರ್‌ನಲ್ಲಿ ಕಾರು ಅಪಘಾತದ ಆರೋಪವಿದೆ. ಈ ಘಟನೆಯಲ್ಲಿ ಬಂಧನಗೊಂಡು ಜೈಲಿನಲ್ಲಿದ್ದರು.
ಹೊಸ ಸರ್ಕಾರ ರಚನೆಯಾದ ಸ್ವಲ್ಪ ಸಮಯದ ನಂತರ ಕೋಟಿಗಟ್ಟಲೆ ಸುಲಿಗೆ ಬೇಡಿಕೆಯ ಆರೋಪಗಳೂ ದಿನೇಶ್ ಲೋಧಿ ಮೇಲಿವೆ. ದಿನೇಶ್ ತಂದೆ, ಶಾಸಕ ಪ್ರೀತಮ್ ಲೋಧಿ ಕೂಡ ದಶಕಗಳ ಹಿಂದಿನ ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ. ಗಲಭೆ, ಹಲ್ಲೆ, ಕೊಲೆ ಮತ್ತು ಕೊಲೆಯತ್ನದ ಆರೋಪಗಳಿವೆ. 2022ರಲ್ಲಿ, ವಿವಾದಾತ್ಮಕ ಹೇಳಿಕೆಯಿಂದಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಇಷ್ಟೊಂದು ವಿವಾದಗಳಿದ್ದರೂ ಚುನಾವಣೆಗೆ ಮುಂಚಿತವಾಗಿ ಲೋಧಿ ಅವರನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ.




