ಚೆನ್ನೈನ ಎಂ.ಎಂ. ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 17 ವರ್ಷಗಳಿಂದ ಅನುಭವಿಸುತ್ತಿದ್ದ ಸೋಲಿನ ವನವಾಸದಿಂದ ಕೊನೆಗೂ ಮುಕ್ತಿ ಪಡೆದಿದೆ. ಜಯ ದಾಖಲಿಸಿ ಯಶಸ್ವಿಯಾಗಿದೆ.
ಚಿದಂಬರಂ ಸ್ಟೇಡಿಯಂನಲ್ಲಿ ಇಂದು(ಮಾ.28) ನಡೆದ ಐಪಿಎಲ್ ಪಂದ್ಯದಲ್ಲಿ ರುತುರಾಜ್ ಗಾಯಕ್‌ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್‌ಗಳ ಅಂತರದಿಂದ ಭರ್ಜರಿಯಾಗಿ ಸೋಲಿಸುವ ಮೂಲಕ ಕೊನೆಗೂ ಸುದೀರ್ಘ 17 ವರ್ಷಗಳ ಬಳಿಕ ಗೆಲುವಿನ ಲಯಕ್ಕೆ ಮರಳಿದೆ. ಐಪಿಎಲ್ ಆರಂಭವಾಗಿದ್ದ 2008ರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಕೊನೆಯ ಬಾರಿಗೆ ಗೆದ್ದಿತ್ತು. ಆ ಬಳಿಕ ಯಾವುದೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನೂತನ ನಾಯಕ ರಜತ್ ಪಾಟೀದಾರ್ ಅವರ ಅರ್ಧಶತಕದ ನೆರವಿನಿಂದ 197 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ಈ ಗುರಿಯನ್ನು ತಲುಪಲು ವಿಫಲವಾದ ಸಿಎಸ್‌ಕೆ, ಆರ್‌ಸಿಬಿಯ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ತುತ್ತಾಗಿ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಆರ್‌ಸಿಬಿ 50 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಸಂಘಟಿತವಾದ ಬೌಲಿಂಗ್ ನಡೆಸಿದ ಆರ್‌ಸಿಬಿ ಬೌಲಿಂಗ್ ವಿಭಾಗವು, ಸಿಎಸ್‌ಕೆಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುವಂತೆ ಮಾಡಿದರು. ತವರಿನ ಮೈದಾನ ಮತ್ತು ಅಭಿಮಾನಿಗಳ ಪ್ರೋತ್ಸಾಹದ ಬಲದಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಚೆನ್ನೈ, 50 ರನ್‌ಗಳ ಅಂತರದಿಂದ ಸೋಲೊಪ್ಪುವ ಮೂಲಕ ಹಿನ್ನಡೆ ಅನುಭವಿಸಿತು. ಗೆಲುವು ಸಾಧಿಸುವ ಹಂಬಲದಿಂದ ಮೈದಾನಕ್ಕೆ ಕಿಕ್ಕಿರಿದು ಬಂದಿದ್ದ ಚೆನ್ನೈ ಅಭಿಮಾನಿಗಳು, ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ತೆರಳಿದರು.
ಸಿಎಸ್‌ಕೆ ಪರ ರಚಿನ್ ರವೀಂದ್ರ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ರಾಹುಲ್ ತ್ರಿಪಾಠಿ, ಜೋಶ್ ಹ್ಯಾಝಲ್‌ವುಡ್ ಎಸೆದ ಮೊದಲ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ರುತುರಾಜ್ ಕೂಡ ಹ್ಯಾಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಕಡೆಗೆ ಮರಳಿದರು. ಆ ಬಳಿಕ ಕ್ರೀಸ್‌ಗೆ ಬಂದ ಸ್ಯಾಮ್ ಕರನ್, ದೀಪಕ್ ಹೂಡಾ, ಶಿವಂ ದುಬೆ, ಅಶ್ವಿನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೊನೆಯಲ್ಲಿ ರವೀಂದ್ರ ಜಡೇಜಾ 25 ರನ್, ಮಹೇಂದ್ರ ಸಿಂಗ್ ಧೋನಿ 30 ರನ್ ಗಳಿಸಿದರು. ರಚಿನ್ ರವೀಂದ್ರ 41 ರನ್ ಗಳಿಸುವ ಮೂಲಕ ಚೆನ್ನೈ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಜೋಶ್ ಹ್ಯಾಝಲ್‌ವುಡ್ 3, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟನ್ ತಲಾ ಎರಡು ವಿಕೆಟ್ ಪಡೆದುಕೊಂಡರೆ, ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು. ಸತತವಾಗಿ ಎರಡು ಪಂದ್ಯದಲ್ಲಿ ಗೆದ್ದಿರುವ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.