ಐಪಿಎಲ್‌ನ ಹಾಟ್ ಫೇವರೀಟ್, ಅಭಿಮಾನಿಗಳ ಅಚ್ಚುಮೆಚ್ಚಿನ ತಂಡ ಆರ್‌ಸಿಬಿ ಕೊನೆಗೂ ಚಾಂಪಿಯನ್ ಆಗಿದೆ.
18 ವರ್ಷಗಳ ಕಾಲ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕನಸು ಕೊನೆಗೂ ನನಸಾಗಿದೆ. ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 18ನೇ ಸೀಸನ್‌ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಸೋಲಿಸುವ ಮೂಲಕ ಚಾಂಪಿಯನ್ ಆಗಿದೆ.
ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಆನಂದ ಬಾಷ್ಪದಿಂದ ಮುಳುಗೇಳತೊಡಗಿದರು.
ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ದಾಖಲೆಯನ್ನು ಬರೆಯಿತು. ಮೂರು ಐಪಿಎಲ್ ಫೈನಲ್‌ನಲ್ಲಿ ನಿರಾಸೆ ಹೊಂದಿದ್ದ ಆರ್‌ಸಿಬಿ, ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾಯಿತು. ಈ ಮೂಲಕ ರಜತ್ ಪಾಟಿದಾರ್ ಮುಂದಾಳತ್ವದ ಆರ್‌ಸಿಬಿ ಐಪಿಎಲ್ ದಾಖಲೆಯ ಪುಟಕ್ಕೆ ದಾಪುಗಾಲು ಹಾಕಿತು.
ಗೆಲ್ಲಲು 191 ರನ್‌ಗಳ ಸವಾಲಿನ ಗುರಿಯನ್ನು ಪಡೆದಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಪರಿಣಾಮ ಅಂತಿಮವಾಗಿ 6 ರನ್‌ಗಳ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವು ಸಂಘಟಿತ ದಾಳಿಗೆ ತುತ್ತಾದ ಪಂಜಾಬ್ ಬ್ಯಾಟಿಂಗ್, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ ಪರ ಉತ್ತಮ ಬೌಲಿಂಗ್ ನಡೆಸಿದ ಕೃನಾಲ್ ಪಾಂಡ್ಯ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.