ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್‌ನ ಇಂದಿನ ಪಂದ್ಯದಲ್ಲಿ ರೊಮಾರಿಯೋ ಶೆಫರ್ಡ್ ಸ್ಫೋಟಕ ಅರ್ಧಶತಕ ಹಾಗೂ ಕೊಹ್ಲಿ, ಬೆತೆಲ್ ಅವರ ಅರ್ಧಶತಕದ ನೆರವಿನಿಂದ ಆರ್‌ಸಿಬಿ 214 ರನ್‌ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿಗೆ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಬೆಥೆಲ್ ಅವರು ಉತ್ತಮ ಆರಂಭವನ್ನೇ ಒದಗಿಸಿದರು. ಈ ಜೋಡಿಯು ಮೊದಲ ವಿಕೆಟ್‌ಗೆ 97 ರನ್ ಕಲೆ ಹಾಕಿತು.
ಬೆಥೆಲ್ ಔಟಾಗುವುದಕ್ಕೂ ಮುನ್ನ 33 ಎಸೆತಗಳಲ್ಲಿ 8 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ನ ನೆರವಿನಿಂದ 55 ರನ್ ಗಳಿಸಿದರು. ಆ ಬಳಿಕ ವಿರಾಟ್ ಕೊಹ್ಲಿ ಭರ್ಜರಿ 5 ಸಿಕ್ಸ್ ಹಾಗೂ 5 ಬೌಂಡರಿಯ ನೆರವಿನಿಂದ 33 ಎಸೆತಗಳಲ್ಲಿ 66 ರನ್ ಗಳಿಸಿದರು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರಜತ್ ಪಾಟೀದಾರ್(11 ರನ್), ದೇವದತ್ ಪಡಿಕ್ಕಲ್(17 ರನ್) ಹಾಗೂ ಜಿತೇಶ್ ಶರ್ಮಾ (7 ರನ್) ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಒಂದು ಹಂತದಲ್ಲಿ 200+ ರನ್ ಗುರಿ ನೀಡುವುದು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಯಿತು. ಆದರೆ, ಕೊನೆಯ ಘಳಿಗೆಯಲ್ಲಿ ಕ್ರೀಸ್‌ಗೆ ಬಂದ ವೆಸ್ಟಿಂಡೀಸ್‌ನ ದೈತ್ಯ ಆಟಗಾರ ರೊಮಾರಿಯೋ ಶೆಫರ್ಡ್ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು.
ಕೇವಲ 14 ಎಸೆತಗಳನ್ನು ಎದುರಿಸಿದ ರೊಮಾರಿಯೋ ಶೆಫರ್ಡ್, 6 ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯ ನೆರವಿನಿಂದ 53 ರನ್ ಚಚ್ಚುವ ಮೂಲಕ ಐಪಿಎಲ್ ಪಂದ್ಯದಲ್ಲಿ ಅತಿವೇಗದ ಎರಡನೇ ಅರ್ಧಶತಕ ಬಾರಿಸಿ, ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು.
ರೊಮಾರಿಯೋ ಶೆಫರ್ಡ್ ಅವರ ಈ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವಿಗೆ 214 ರನ್‌ಗಳ ಗುರಿಯನ್ನು ನೀಡಿತು.
ಚೆನ್ನೈ ಪರವಾಗಿ 19ನೇ ಓವರ್ ಎಸೆದ ಖಲೀಲ್ ಅವರ ಓವರ್‌ನಲ್ಲಿ 33 ರನ್ ಚಚ್ಚಲಾಯಿತು. ಖಲೀಲ್ ಅವರು 3 ಓವರ್‌ನಲ್ಲಿ 65 ರನ್ ನೀಡುವ ಮೂಲಕ ದುಬಾರಿಯಾಗಿ ಪರಿಣಮಿಸಿದರು.
ಚೆನ್ನೈ ಪರವಾಗಿ ಬೌಲಿಂಗ್‌ನಲ್ಲಿ ಪತಿರಾಣಾ ಮೂರು ವಿಕೆಟ್ ಪಡೆದರೆ, ಸ್ಯಾಮ್ ಕರನ್ ಹಾಗೂ ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
