ಕೇವಲ 83 ಎಸೆತಗಳಲ್ಲಿ 174 ರನ್ ಗಳಿಸಿದ ಹೆನ್ರಿಕ್ ಕ್ಲಾಸೆನ್ ಅವರ ಅದ್ಭುತ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐದು ಪಂದ್ಯಗಳ ಸರಣಿಯ 4ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 164 ರನ್‌ಗಳ ಬೃಹತ್ ಜಯ ದಾಖಲಿಸಿತು.
ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಎರಡು ನೂತನ ದಾಖಲೆಗಳನ್ನು ಏಕದಿನ ಪಂದ್ಯದಲ್ಲಿ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. 416 ರನ್ ಗಳಿಸಿದ ಹರಿಣ ಪಡೆ ಏಕದಿನ ಪಂದ್ಯಗಳಲ್ಲಿ 8ನೇ ಅತ್ಯಧಿಕ ಮೊತ್ತ ದಾಖಲಿಸಿದೆ. ಕೊನೆಯ 10 ಓವರ್‌ಗಳಲ್ಲಿ 173 ರನ್ ಪೇರಿಸಿ ಹೊಸ ಇತಿಹಾಸ ನಿರ್ಮಿಸಿತು. ಈ ಮೊದಲು ಇಂಗ್ಲೆಂಡ್ ತಂಡ ನದರ್‌ಲ್ಯಾಂಡ್ ತಂಡದ ವಿರುದ್ಧ ಕಡೆಯ 10 ಓವರ್‌ಗಳಲ್ಲಿ 2022ರಲ್ಲಿ 164 ರನ್ ಗಳಿಸಿದ್ದು ಅತ್ಯಧಿಕ ಮೊತ್ತವಾಗಿತ್ತು.
ಏಕದಿನ ಪಂದ್ಯದಲ್ಲಿ ಭಾರತ ತಂಡದ ಅತ್ಯಧಿಕ ಮೊತ್ತ 418 ರನ್ ಆಗಿದೆ. 2011ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಟೀಂ ಇಂಡಿಯಾ ಈ ಮೊತ್ತವನ್ನು ಗಳಿಸಿತ್ತು. ಈ ದಾಖಲೆಯನ್ನು ದಕ್ಷಿಣ ಆಫ್ರಿಕಾ ಸರಿಗಟ್ಟಿದೆ. ಈ ಸ್ಕೋರ್ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಐದನೇ ಗರಿಷ್ಠ ಸ್ಕೋರ್ ಕೂಡ ಆಗಿದೆ.
ದಕ್ಷಿಣ ಆಫ್ರಿಕಾದ ಸಂಚೂರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ದಕ್ಷಿಣ ಹರಿಣ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ | ಶುಭ್‌ಮನ್ ಗಿಲ್ ಶತಕ ವ್ಯರ್ಥ; ಸಂಘಟಿತ ಹೋರಾಟದಿಂದ ಬಾಂಗ್ಲಾಗೆ ಗೆಲುವು
ಹೆನ್ರಿಕ್ ಕ್ಲಾಸೆನ್ 83 ಎಸೆತಗಳಲ್ಲಿ 174 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದರು. ಇದಲ್ಲದೇ ಡೇವಿಡ್ ಮಿಲ್ಲರ್ 45 ಎಸೆತಗಳಲ್ಲಿ ಅಜೇಯ 82 ರನ್(ಐದು ಸಿಕ್ಸ್, 6 ಬೌಂಡರಿ) ಗಳಿಸಿದರು. ತಂಡಕ್ಕೆ ಡುಸೆನ್ 62(65 ಚೆಂಡು, 7 ಬೌಂಡರಿ, 2 ಸಿಕ್ಸ್) ರನ್ ಕೊಡುಗೆ ನೀಡಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 416 ರನ್ ಗಳಿಸಿತು.
34 ಓವರ್‌ಗಳಲ್ಲಿ ಆಸಿಸ್ ಆಲೌಟ್
417 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮಿಷಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯ ತಂಡ ಲುಂಗಿ ಎನ್ಗಿಡಿ(51/4) ಹಾಗೂ ಕಗಿಸೊ ರಬಾಡ(41/3) ಅವರ ದಾಳಿಗೆ ಸಿಲುಕಿ 34.5 ಓವರ್‌ಗಳಲ್ಲಿ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡ ಅಲೆಕ್ಸ್ ಕ್ಯಾರಿ 99 ರನ್ ಗಳಿಸಿರುವುದು ಅತ್ಯಧಿಕ ಮೊತ್ತವಾಗಿದೆ. ಇದರ ಹೊರತಾಗಿ ಟಿಮ್ ಡೆವಿಡ್ 35 ರನ್ ಗಳಿಸಿರುವುದು ಬಿಟ್ಟರೆ ಆಸ್ಟ್ರೇಲಿಯಾ ತಂಡದ ಇತರ ಆಟಗಾರರ್‍ಯಾರು 20ರ ಗಡಿ ದಾಟಲಿಲ್ಲ. 174 ರನ್ ಗಳಿಸಿದ ಹೆನ್ರಿಕ್ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಐದು ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು 2-2 ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಸರಣಿ ಸಮಬಲ ಸಾಧಿಸಿದ್ದು, ಐದನೇ ಹಾಗೂ ಮಹತ್ವದ ಪಂದ್ಯ ಸೆ.17 ರಂದು ಭಾನುವಾರ ನಡೆಯಲಿದೆ.