ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರಾಷ್ಟ್ರೀಯ ತಂಡದ ಪುರುಷರ ಮುಖ್ಯ ಕೋಚ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದು, 2023ರ ಏಕದಿನ ವಿಶ್ವಕಪ್ ವೇಳೆಗೆ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದಿದೆ. ಬಿಸಿಸಿಐ ದ್ರಾವಿಡ್ ಅವರ ಅವಧಿಯನ್ನುಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ತನಕ ಮುಂದುವರೆಸಿದೆ.
ಬಿಸಿಸಿಐ ಹುದ್ದೆಯ ವಿವರವನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಫುರುಷರ ಹಿರಿಯರ ಮುಖ್ಯ ಕೋಚ್ ಹುದ್ದೆಯ ಅವಧಿಯು 3.5 ವರ್ಷಗಳವರೆಗೆ ಇರಲಿದ್ದು, 2024, ಜುಲೈ 1ರಿಂದ ಡಿಸೆಂಬರ್ 31 2027ರವರೆಗೂ ಕಾರ್ಯನಿರ್ವಹಿಸಲಿದ್ದಾರೆ.
ಮುಖ್ಯ ಕೋಚ್ ಹುದ್ದೆಯು ಭಾರತ ಕ್ರಿಕೆಟ್ ತಂಡವನ್ನು ಟಿ20, ಏಕದಿನ ಹಾಗೂ ಟೆಸ್ಟ್ ಒಳಗೊಂಡು ಎಲ್ಲ ಮಾದರಿಯಲ್ಲೂ ‘ವಿಶ್ವದ ಅತ್ಯುತ್ತಮ ತಂಡವಾಗಿ’ ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಿಸುವುದು. ಸಹಾಯಕ ಕೋಚ್‌ಗಳು ಹಾಗೂ ಸಿಬ್ಬಂದಿ ತರಬೇತುದಾರರನ್ನು ನಿರ್ವಹಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿರುತ್ತದೆ.
ಬಿಸಿಸಿಐ ಹಾಗೂ ಐಸಿಸಿ ನೀತಿ ಸಂಹಿತೆ ಹಾಗೂ ಶಿಸ್ತು ಸಂಹಿತೆಗಳಿಗೆ ಬದ್ಧರಾಗಿ ಜಾರಿಗೊಳಿಸುವುದು ಕೂಡ ಮುಖ್ಯ ಕೋಚ್‌ನ ಪ್ರಮುಖ ಜವಾಬ್ದಾರಿಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ ವಿರುದ್ಧ ಚೆನ್ನೈಗೆ ಜಯ; ಆರ್‌ಸಿಬಿ ಪ್ಲೇಆಫ್ ಕನಸು ಕ್ಷೀಣ, ಔಟ್‌ಲ್ಲೂ ರವೀಂದ್ರ ಜಡೇಜಾ ದಾಖಲೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರಿಕೆಟ್‌ನಲ್ಲಿ ಗಮನಾರ್ಹ ಅನುಭವವನ್ನು ಹೊಂದಿರಬೇಕು. ಕನಿಷ್ಠ 30 ಟೆಸ್ಟ್‌ಗಳು ಅಥವಾ 50 ಏಕದಿನ ಆಡಿರಬೇಕು ಅಥವಾ ಎರಡು ವರ್ಷ ಟೆಸ್ಟ್ ಆಡಿರುವ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯನ್ನು ನಿರ್ವಹಿಸಿರಬೇಕು.
ಇದರ ಜೊತೆ ಐಪಿಎಲ್ ತಂಡ ಅಥವಾ ಅದಕ್ಕೆ ಸಮನಾರ್ಹ ಮಾದರಿಗಳಲ್ಲಿ ಮುಖ್ಯ ಕೋಚ್ ಆಗಿರುವವರ ಬಳಿ ಸಹಾಯಕ ಸದಸ್ಯರಾಗಿ ಮೂರು ವರ್ಷ ಅನುಭವ ಹೊಂದಿರಬೇಕು. ಬಿಸಿಸಿಐ ಮಟ್ಟದ 3 ಪ್ರಮಾಣಪತ್ರ ಅಥವಾ ಸಮಾನಾರ್ಹವಾದುದನ್ನು ಒಳಗೊಂಡಿರಬೇಕು. ಅಭ್ಯರ್ಥಿಗಳು ವಯಸ್ಸಿನಲ್ಲಿ 60 ವರ್ಷಕ್ಕಿಂತ ಕೆಳಗಿರಬೇಕು.
ಪುರುಷರ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್‌ನ ವೇತನದ ಬಗ್ಗೆ ವಿವರಿಸಿರುವ ಬಿಸಿಸಿಐ, ವೇತನವು ನೆಗೋಶಿಯಬಲ್(ಮಾತುಕತೆ ಮೂಲಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು) ಹಾಗೂ ಅನುಭವಕ್ಕೆ ಅನುಗುಣವಾಗಿ ನೀಡಲಾಗುತ್ತದೆ” ಎಂದು ತಿಳಿಸಲಾಗಿದೆ.
ಈಗ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರಿಗೆ ವಾರ್ಷಿಕವಾಗಿ 12 ಕೋಟಿ ರೂ. ವೇತನ ನೀಡಲಾಗುತ್ತಿದೆ. ಹಿಂದೆ ರವಿ ಶಾಸ್ತ್ರಿ ಅವರಿಗೆ 9 ರಿಂದ 10 ಕೋಟಿ ವೇತನ ನೀಡಲಾಗುತ್ತಿತ್ತು. ನೂತನ ಕೋಚ್‌ಗೆ 12 ಕೋಟಿಗೂ ಹೆಚ್ಚು ವೇತನ ನೀಡುವ ಸಾಧ್ಯತೆಯಿದೆ ಎನ್ನುತ್ತಿವೆ ಮೂಲಗಳು.
