ದಕ್ಷಿಣ ಆಫ್ರಿಕಾ ತಂಡ 2024ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇಆಫ್ ಹಂತಕ್ಕೇರಿದೆ.
ರನ್‌ಗಳ ಬರ ಎದುರಿಸುತ್ತಿರುವ ಪಿಚ್‌ನಲ್ಲಿ 114 ರನ್‌ಗಳ ಸಾಧಾರಣ ಮೊತ್ತವನ್ನು ಗುರಿ ನೀಡಿದ್ದ ದಕ್ಷಿಣ ಆಫ್ರಿಕಾ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸ್ಪಿನ್ನರ್ ಕೇಶವ್ ಮಹಾರಾಜ್ 27/3, ಕಗ್ಗಿಸೋ ರಬಾಡ 19/2 ಹಾಗೂ ಅನ್‌ರಿಚ್ ನೋರ್ಟ್‌ಜೆ 17/2 ಬೌಲಿಂಗ್ ದಾಳಿಯಿಂದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 109 ರನ್‌ಗಳಷ್ಟೆ ಗಳಿಸುವಲ್ಲಿ ಶಕ್ತವಾಯಿತು.
ಕೊನೆಯ ಓವರ್‌ನಲ್ಲಿ ಬಾಂಗ್ಲಾ ಗೆಲುವಿಗೆ 11 ರನ್‌ಗಳು ಬೇಕಿತ್ತು. 20 ರನ್ ಗಳಿಸಿದ್ದ ಮಹ್ಮದುಲ್ಲಾ ಕ್ರೀಸಿನಲ್ಲಿದ್ದರು. ಕೊನೆಯ 2 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಮಹ್ಮದುಲ್ಲಾ ಬೀಸಿದ ಎಸೆತವನ್ನು ಬೌಂಡರಿ ಲೈನ್ ಬಳಿ ದಕ್ಷಿಣ ಆಫ್ರಿಕಾ ತಂಡದ ಮರ್ಕ್ರಾಮ್ ಕ್ಯಾಚ್ ಹಿಡಿದರು. ತಂಡವು ಕೊನೆಗೆ 4 ರನ್‌ಗಳ ಅಂತರದಿಂದ ಸೋಲು ಕಂಡಿತು.
ಬಾಂಗ್ಲಾದೇಶ ಪರ ತೌಹೀದ್ ಹೃದಯೋಯ್ (37),ನಾಯಕ ನಜ್‌ಮುಲ್ ಶಾಂಟೊ (14), ಮಹ್ಮದುಲ್ಲಾ(20) ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ರನ್ ಗಳಿಸುವಲ್ಲಿ ವಿಫಲರಾದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕದ ಜೊತೆಯಾಟದ ನೆರವಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್, ಎದುರಿಸಿದ ಮೊದಲ ಚಂಡಿನಲ್ಲೆ ಔಟಾದರು. ಕ್ವಿಂಟನ್ ಡಿ ಕಾಕ್ ಪಂದ್ಯದ ಮೊದಲ ಮೂರು ಎಸೆತಗಳಲ್ಲಿ 10 ರನ್ ಗಳಿಸಿದರು. ಆದರ ನಂತರದಲ್ಲಿ ರನ್ ಗಳಿಸಲು ವಿಫಲರಾಗಿ 11 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ 5 ಎಸೆತ ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದರು. ನಾಯಕ ಐಡೆನ್ ಮಾರ್ಕ್ರಮ್ ಆಟ 4 ರನ್‌ಗಳಿಗೆ ಸೀಮಿತವಾಯಿತು.
ಮೊದಲ ಆರು ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 25 ರನ್ ಕಲೆ ಹಾಕಿತು. ಈ ವೇಳೆ ತಂಡಕ್ಕೆ ಉತ್ತಮ ಜೊತೆಯಾಟವೊಂದರ ಅಗತ್ಯವಿತ್ತು. ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಈ ಜವಾಬ್ದಾರಿ ತೆಗೆದುಕೊಂಡರು. ಇವರಿಬ್ಬರ ನಡುವೆ 79 ರನ್‌ಗಳ ಆಕರ್ಷಕ ಜೊತೆಯಾಟ ಕಂಡುಬಂತು. ನಿಧಾನವಾಗಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಕ್ಲಾಸೆನ್ 46 ರನ್ ಗಳಿಸಿದರೆ,, ಮಿಲ್ಲರ್ 29 ರನ್ ಸಿಡಿಸಿದರು.
ಬಾಂಗ್ಲಾದೇಶ ಪರ ತಂಜಿಮ್ ಹಸನ್ ಸಾಕಿಬ್ 18/3 ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ 19/2 ವಿಕೆಟ್ ಕಿತ್ತರು.
