ಐಪಿಎಲ್ 16ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಉಭಯ ತಂಡಗಳು ಪ್ರಸಕ್ತ ಟೂರ್ನಿಯ ಆರಂಭದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದವು. ಆದರೆ ನಂತರದಲ್ಲಿ ಪುಟಿದೆದ್ದು ಎರಡೂ ಪಂದ್ಯಗಳನ್ನು ಗೆದ್ದು ಕಮ್ ಬ್ಯಾಕ್ ಮಾಡಿವೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ಗುರಿಯೊಂದಿಗೆ ಮುಂಬೈ-ಎಸ್‌ಆರ್‌ಎಚ್ ತಂಡಗಳು ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿವೆ.
ಅನಾರೋಗ್ಯದ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ, ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೆಕೆಆರ್ ವಿರುದ್ಧ ಪದಾರ್ಪಣೆ ಪಂದ್ಯವನ್ನಾಡಿದ್ದರು. ಎರಡು ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್, 16 ರನ್ ನೀಡಿದ್ದರಾದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಅದಾಗಿಯೂ ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಶತಕ ವೀರ ಹ್ಯಾರಿ ಬ್ರೂಕ್, ಎಸ್‌ಆರ್‌ಎಚ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
ಆದರೆ ಮತ್ತೋರ್ವ ಪ್ರಮುಖ ಬ್ಯಾಟರ್ ಮಯಾಂಕ್ ಅಗರ್ವಾಲ್, ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ಮಯಾಂಕ್ ಕ್ರಮವಾಗಿ 27, 8, 21 ಹಾಗೂ 9 ರನ್ ಗಳಿಸಿದ್ದಾರೆ.
ಟೂರ್ನಿಯಲ್ಲಿ ಎರಡು ಗೆಲುವು ಮತ್ತು ಸೋಲು ಕಂಡಿರುವ ಮುಂಬೈ-ಎಸ್‌ಆರ್‌ಎಚ್ ತಂಡಗಳು ಅಂಕಪಟ್ಟಿಯಲ್ಲಿ 8 ಮತ್ತು 9ನೇ ಸ್ಥಾನದಲ್ಲಿವೆ.