- ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಘಟನೆ
- ನಿಧಾನಗತಿಯ ಬೌಲಿಂಗ್‌ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ‘ರೆಡ್ ಕಾರ್ಡ್’ ಬಳಕೆ
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ‘ರೆಡ್ ಕಾರ್ಡ್’ ನಿಯಮವನ್ನು ಜಾರಿಗೆ ತರಲಾಗಿದ್ದು, ಇದರ ಮೊದಲ ಬಲಿಪಶುವಾಗಿ ಸುನಿಲ್ ನರೇನ್ ಮೈದಾನ ತೊರೆಯುವಂತಾಯಿತು.
ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ‘ರೆಡ್ ಕಾರ್ಡ್’ ಪಡೆದ ಆಟಗಾರನೆಂಬ ಕುಖ್ಯಾತಿಗೆ ಸುನಿಲ್ ನರೇನ್ ಒಳಗಾದರು.
ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಅಂಪೈರ್ ಮೊದಲ ಬಾರಿಗೆ ರೆಡ್ ಕಾರ್ಡ್ ತೋರಿಸಿದರು.
ಈ ಪಂದ್ಯದಲ್ಲಿ ನಿಗದಿತ ಸಮಯದೊಳಗೆ 19 ಓವರ್ಗಳನ್ನು ಪೂರ್ಣಗೊಳಿಸದ ಕಾರಣ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಅಂಪೈರ್ ರೆಡ್ ಕಾರ್ಡ್ ತೋರಿಸಿದ್ದರು. ಅಲ್ಲದೆ ಈ ನಿಯಮದಂತೆ ಒಬ್ಬ ಆಟಗಾರನು ಮೈದಾನದಿಂದ ಹೊರಗುಳಿಯಬೇಕಿತ್ತು.
ಈ ವೇಳೆ ನಾಯಕ ಕೀರನ್ ಪೊಲಾರ್ಡ್, ಸುನಿಲ್ ನರೇನ್ ಅವರಿಗೆ ರೆಡ್ ಕಾರ್ಡ್ ತೋರಿಸುವಂತೆ ಅಂಪೈರ್ಗೆ ತಿಳಿಸಿದರು. ಅದರಂತೆ 19ನೇ ಓವರ್ ಮುಕ್ತಾಯದ ಬೆನ್ನಲ್ಲೇ ನರೇನ್ ಮೈದಾನ ತೊರೆದರು. ಇದರೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಾಗೂ ಕ್ರಿಕೆಟ್ ಇತಿಹಾಸದಲ್ಲಿ ‘ರೆಡ್ ಕಾರ್ಡ್’ ಪಡೆದ ಮೊದಲ ಆಟಗಾರ ಎನಿಸಿಕೊಂಡರು.
ನಿಧಾನಗತಿಯ ಬೌಲಿಂಗ್‌ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ‘ರೆಡ್ ಕಾರ್ಡ್’ ಅನ್ನು ಕ್ರಿಕೆಟ್‌ನಲ್ಲಿ ಅಳವಡಿಸಲಾಗಿದೆ. ಫೀಲ್ಡ್ ಅಂಪೈರ್ ರೆಡ್ ಕಾರ್ಡ್ ತೋರಿಸಿ ಈ ನಿಯಮವನ್ನು ತಕ್ಷಣವೇ ಜಾರಿಗೊಳಿಸುತ್ತಾರೆ.
ಅದರಂತೆ ಟ್ರಿನ್‌ಬಾಗೊ ನೈಟ್ ರೈಡರ್ಸ್ 20ನೇ ಓವರ್‌ನ ಆರಂಭದ ವೇಳೆ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ಹಿಂದೆ ಉಳಿದಿದ್ದ ಕಾರಣ ಸುನಿಲ್ ನರೇನ್ ಅವರನ್ನು ಹೊರಗೆ ಕಳುಹಿಸಿ, ಕೊನೆಯ ಓವರ್ನಲ್ಲಿ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಿದೆ.