- ವೆಸ್ಟ್ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 9 ವಿಕೆಟ್ಗಳ ಜಯ
- ಇಂದು ಫ್ಲೋರಿಡಾದಲ್ಲಿ ಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ
ಯುವ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಅಮೋಘ ಜೊತೆಯಾಟ ನಡೆಸಿದ ಪರಿಣಾಮ, ವೆಸ್ಟ್ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 178 ರನ್ಗಳ ಸವಾಲಿನ ಗುರಿ ನೀಡಿತ್ತು.
ವಿಂಡೀಸ್ ಪರವಾಗಿ ಶಾಯ್ ಹೋಪ್ ಹಾಗೂ ಶಿಮ್ರಾನ್ ಹೆಟ್ಮಾಯರ್ ಅದ್ಭುತ ಪ್ರದರ್ಶನ ನೀಡಿದರು.
ಶಾಯ್ ಹೋಪ್ 45 ರನ್ಗಳನ್ನು ಗಳಿಸಿದ್ದರೆ, ಹೆಟ್ಮಾಯರ್ 61 ರನ್ಗಳ ಕೊಡುಗೆ ನೀಡಿದರು. ಹೀಗಾಗಿ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 178 ರನ್ಗಳ ಸವಾಲಿನ ಗುರಿ ನೀಡಲು ಯಶಸ್ವಿಯಾಗಿತ್ತು.
ಟೀಮ್ ಇಂಡಿಯಾ ಪರ ಅರ್ಶ್ದೀಪ್ ಸಿಂಗ್ ನಿರ್ಣಾಯಕ ಮೂರು ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್, ಯಜುವೇಂದ್ರ ಚಹಾಲ್ ಮತ್ತು ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ವಿಂಡೀಸ್ ನೀಡಿದ್ದ ಬೃಹತ್ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಟೀಮ್ ಇಂಡಿಯಾದ ಆರಂಭಿಕ ಜೋಡಿ, ಮೊದಲ ವಿಕೆಟ್ಗೆ 165 ರನ್ಗಳ ಜೊತೆಯಾಟ ನಡೆಸಿದರು.
165 ರನ್ಗಳ ಜೊತೆಯಾಟ ನೀಡುವ ಮೂಲಕ ಭಾರತದ ಪರವಾಗಿ ಅತಿ ಹೆಚ್ಚು ರನ್ಗಳ ಜೊತೆಯಾಟ ನೀಡಿದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಕೂಡ ಇಷ್ಟೇ ರನ್ಗಳ ಜೊತೆಯಾಟ ನೀಡಿದ್ದು, ಆ ದಾಖಲೆಯನ್ನು ಈಗ ಗಿಲ್-ಜೈಸ್ವಾಲ್ ಜೋಡಿ ಸರಿಗಟ್ಟಿದೆ.
ಪಂದ್ಯದಲ್ಲಿಗಿಲ್ 47 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ನೆರವಿನಿಂದ 77 ರನ್ಗಳನ್ನು ಗಳಿಸಿ ಔಟಾದರು. ಎರಡನೇ ಟಿ20 ಪಂದ್ಯವನ್ನಾಡುತ್ತಿರುವ ಯಶಸ್ವಿ ಜೈಸ್ವಾಲ್ 84 ರನ್ಗಳನ್ನು ಗಳಿಸಿ ಅಜೇಯವಾಗುಳಿದರು. ತಿಲಕ್ ವರ್ಮಾ 7 ರನ್ ಗಳಿಸಿ ಅಜೇಯವಾಗುಳಿದರು.
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ್ದು ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಭಾನುವಾರ(ಇಂದು) ಫ್ಲೋರಿಡಾದಲ್ಲಿ ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ, ಟಿ20 ಸರಣಿ ತನ್ನ ಕೈವಶ ಮಾಡಿಕೊಳ್ಳಲಿದೆ.