ಬಾಂಗ್ಲಾದೇಶ ಮತ್ತು ಇಂಡಿಯಾ ನಡುವೆ ಪುಣೆಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಶತಕದ ಹೊಸ್ತಿಲಲ್ಲಿದ್ದಾಗ ಅಂಪೈರ್ ವೈಡ್ ನೀಡದೆ ಇದ್ದದ್ದು ಚರ್ಚೆಗೆ ಕಾರಣವಾಗಿದೆ ಮತ್ತು ಟ್ರೋಲರ್‌ಗಳಿಗೆ ಆಹಾರವಾಗಿದೆ.
ಕೊಹ್ಲಿ ಶತಕ ಪೂರೈಸಲು ಇನ್ನು ಮೂರು ರನ್‌ಗಳು ಬೇಕಾಗಿದ್ದವು. ಗೆಲುವಿಗೆ ಎರಡು ರನ್‌ಗಳು ಸಾಕಿದ್ದವು. ಈ ಸಂದರ್ಭದಲ್ಲಿ ಸ್ಪಿನ್ನರ್ ನಸುಮ್ ಅಹ್ಮದ್ ಲೆಗ್-ಸ್ಟಂಪ್‌ನ ಹೊರಗೆ ಬಾಲ್ ಬೌಲ್ ಮಾಡಿದರು. ಆದರೆ ಅಂಪೈರ್ ವೈಡ್ ಕೊಡಲಿಲ್ಲ. ನಂತರದಲ್ಲಿ ಕೊಹ್ಲಿ ಸಿಕ್ಸ್ ಭಾರಿಸುವ ಮೂಲಕ ಶತಕ ಪೂರೈಸಿದರು. ಇದು ಚರ್ಚೆಯನ್ನು ಹುಟ್ಟು ಹಾಕಿದೆ.
ಅಂಪೈರ್ ರಿಚರ್ಡ್ ಕೆಟಲ್‌ಬರೋ ಅವರು ಕೊಹ್ಲಿ ಪರ ಒಲವು ತೋರಿದರೆ? ವೈಡ್ ಬಾಲ್ ನೀಡದೆ ಇದ್ದದ್ದು ಏತಕ್ಕೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಜೊತೆಗೆ ಕೆಲವು ಅಭಿಮಾನಿಗಳು, ಪತ್ರಕರ್ತರು ಕೆಟಲ್ ಬರೋ ಅವರನ್ನು ಟೀಕಿಸಿದ್ದಾರೆ.
ವಾಸ್ತವದಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ವೈಡ್ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಕ್ರಿಕೆಟ್ ಕಾನೂನುಗಳನ್ನು ರೂಪಿಸುವ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) 2022ರಲ್ಲಿ ವೈಡ್ ನಿಯಮಗಳಲ್ಲಿ ತಿದ್ದುಪಡಿಗಳನ್ನು ತಂದಿದೆ. ಹೀಗಾಗಿ ಕಿಟಲ್‌ಬರೋ ಅವರು ’ವೈಡ್ ನೀಡದೆ ಇರುವ ನಿರ್ಧಾರ’ ಸರಿಯಾಗಿಯೇ ಇದೆ. ಕ್ರಿಕೆಟ್ ನಿಯಮಗಳನ್ನು ರೂಪಿಸುವ ಎಂಸಿಸಿ, 2022ರಲ್ಲಿ ವೈಡ್ ವಿಚಾರವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿತು. ಬೌಲರ್‌ಗಳಿಗೆ ಅನುಕೂಲವಾಗಲೆಂದು ರೂಪಿಸಿದ ನಿಯಮ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್ ಕೊಹ್ಲಿಗೆ ವರದಾನವಾಯಿತು.
ನಿಯಮ ಏನು ಹೇಳುತ್ತದೆ?
ಬೌಲರ್ ಓಟ ಶುರು ಮಾಡುವ ವೇಳೆ ಬ್ಯಾಟ್ಸ್‌ಮನ್ ತಾನು ನಿಂತಿದ್ದ ಸ್ಥಾನದಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಚಲಿಸುವುದು ಸಾಮಾನ್ಯ. ಇದಕ್ಕೆ ಸಂಬಂಧಿಸಿದಂತೆ 2022ರ ಮಾರ್ಚ್‌ನಲ್ಲಿ ಎಂಸಿಸಿ ಒಂದು ಕಾನೂನನ್ನು ರೂಪಿಸಿತು. ಬಾಲ್ ಎಸೆಯುವ ಮುನ್ನ ಬ್ಯಾಟರ್ ಎಲ್ಲಿ ನಿಂತಿರುತ್ತಾನೆ ಎಂಬುದನ್ನು ಗಣನೆಗೆ ತೆಗೆದುಕೊಂಡು ವೈಡ್ ನಿರ್ಧಾರ ಮಾಡಲಾಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ತಾವು ನಿಂತಿದ್ದ ಜಾಗದಿಂದ ಕೊಂಚ ಮುಂದಕ್ಕೆ ಸರಿಯುವುದನ್ನು ಅಕ್ಟೋಬರ್ 19ರಂದು ನಡೆದ ಪಂದ್ಯದಲ್ಲಿ ಗಮನಿಸಬಹುದು. ಕೊಹ್ಲಿ ತಾವು ಸ್ಟ್ರೈಕ್ ಮಾಡಲು ನಿಂತಿದ್ದಲ್ಲಿಯೇ ಇದ್ದಿದ್ದರೆ ನಸುಮ್ ಎಸೆದ ಬಾಲ್ ಕೊಹ್ಲಿಯ ಕಾಲು ಅಥವಾ ತೊಡೆಯ ಮೇಲೆ ಬೀಳುತ್ತಿತ್ತು. ಹೀಗಾಗಿ ಕೆಟಲ್‌ಬರೋ ವೈಡ್ ನೀಡಲಿಲ್ಲ. ಇದು ಎಂಸಿಸಿ ರೂಪಿಸಿದ ಕಾನೂನಿಗೆ ಬದ್ಧವಾದ ನಿರ್ಧಾರವಾಗಿದೆ.
ಬೌಲರ್ ಬಾಲ್ ಎಸೆಯುವ ಮುನ್ನವೇ ಇತ್ತೀಚಿನ ವರ್ಷಗಳಲ್ಲಿ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಅತ್ತಿಂದಿತ್ತ ಚಲಿಸುವುದನ್ನು ಎಂಸಿಸಿ ಉಲ್ಲೇಖಿಸುತ್ತದೆ. ಬಾಲ್ ಎಸೆಯುವ ಮುನ್ನ ತಾನು ನಿಂತಿದ್ದ ಜಾಗದಿಂದ ಮುಂದಕ್ಕೆ ಸರಿದಾಗ, ಬಾಲು ಆ ದಿಕ್ಕಿನಲ್ಲಿ ಹಾದಿ ಹೋದರೆ ಅದನ್ನು ವೈಡ್ ಎನ್ನುವುದು ನ್ಯಾಯೋಚಿತವಲ್ಲ ಎನ್ನುತ್ತದೆ ಎಂಸಿಸಿ.
ಬೌಲರ್ ಓಡಿ ಬರುವ ಮುನ್ನ ಬ್ಯಾಟರ್ ಎಲ್ಲಿ ನಿಂತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ಎಂಸಿಸಿಯ 22.1ನೇ ನಿಯಮ ಹೇಳುತ್ತದೆ. ಹೀಗಾಗಿ ಕೊಹ್ಲಿ ಪರವಾಗಿ ಕೆಟಲ್‌ಬರೋ ಪಕ್ಷಪಾತಿಯಾಗಿ ನಡೆದುಕೊಂಡಿಲ್ಲ. ಹೊರತಾಗಿ ಕ್ರಿಕೆಟ್ ನಿಯಮವನ್ನು ಪಾಲಿಸಿದ್ದಾರೆಂಬುದು ಕ್ರೀಡಾ ತಜ್ಞರ ಅಭಿಪ್ರಾಯ.