- ಏಪ್ರಿಲ್ 10ರಂದು ಬೆಂಗಳೂರು ವಿರುದ್ಧ ಲಖನೌ ಗೆದ್ದಾಗ ಪ್ರೇಕ್ಷಕರನ್ನು ಪ್ರಚೋದಿಸಿದ್ದ ಗಂಭೀರ್
- ನಿನ್ನೆಯ ಪಂದ್ಯದಲ್ಲಿ ಗಂಭೀರ್ ರೀತಿಯಲ್ಲಿಯೇ ಆರ್‌ಸಿಬಿ ಅಭಿಮಾನಿಗಳನ್ನು ಹುರಿದುಂಬಿಸಿದ್ದ ಕೊಹ್ಲಿ
ಸೋಮವಾರ ಲಖನೌನಲ್ಲಿ ನಡೆದ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವೆ ನಡೆದ ಐಪಿಎಲ್ ಪಂದ್ಯದ ನಂತರ ಮಾತಿನ ಚಕಮಕಿ ನಡೆಸಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರಿಗೆ ಬಿಸಿಸಿಐ ಪಂದ್ಯದ ಸಂಭಾವನೆಯಲ್ಲಿ ಶೇ 100ರಷ್ಟು ದಂಡ ವಿಧಿಸಿದೆ. ಇವರೊಂದಿಗೆ ಲಖನೌ ವೇಗಿ ನವೀನ್ ಉಲ್ ಹಕ್ ಅವರಿಗೂ ಪಂದ್ಯದ ಸಂಭಾವನೆಯ ಶೇ 50ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಕಲಂ 2.21ರ ಅಡಿಯಲ್ಲಿ ಎರಡನೇ ಹಂತದ ಅಪರಾಧವನ್ನು ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಇಬ್ಬರು ಒಪ್ಪಿಕೊಂಡಿದ್ದು, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ 100ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದೇಶದ ಪ್ರಕಾರ ಕೊಹ್ಲಿ ₹1.07 ಕೋಟಿ ದಂಡವನ್ನು ಪಾವತಿಸಬೇಕಿದ್ದರೆ, ಗೌತಮ್ ಗಂಭೀರ್ ಅವರು ₹25 ಲಕ್ಷ ಪಾವತಿಸಬೇಕಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಅವರಿಗೆ ₹1.79 ಕೋಟಿ ದಂಡ ವಿಧಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ, ಲಖನೌ ವಿರುದ್ಧ 18 ರನ್‌ಗಳ ಅಂತರದಲ್ಲಿ ಜಯಗಳಿಸಿತ್ತು. ಪಂದ್ಯ ಗೆಲುವು ಸಾಧಿಸಿದ ನಂತರ ಹಸ್ತಲಾಘವ ಮಾಡುವ ಸಂದರ್ಭದಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಇಬ್ಬರೂ ಆಟಗಾರರು ಬೈದಾಡಿಕೊಂಡಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಉಭಯ ತಂಡದ ಆಟಗಾರರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನಗೊಳಿಸಿದ್ದರು. ಅಲ್ಲದೆ ಇವರಿಬ್ಬರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಚೆನ್ನೈ vs ಪಂಜಾಬ್; ವಿಶಿಷ್ಠ ದಾಖಲೆ ಬರೆದ ಎಂಎಸ್ ಧೋನಿ
ಮೊದಲು ಶುರು ಮಾಡಿದ್ದು ಗಂಭೀರ್!
ಏಪ್ರಿಲ್ 10ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಖನೌ ಮತ್ತು ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಲಖನೌ ಒಂದು ವಿಕೆಟ್ ಅಂತರದಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿದ್ದ ಗಂಭೀರ್ ನೆರೆದಿದ್ದ ಆರ್‌ಸಿಬಿ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಲಖನೌದ ಕೃನಾಲ್ ಪಾಂಡ್ಯ ಔಟಾದ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳತ್ತ ತಿರುಗಿ, ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳಿಗೆ ಹೇಗೆ ಸೂಚನೆ ನೀಡಿದ್ದಾರೋ ಅದೇ ಮಾದರಿಯಲ್ಲಿ ಕೊಹ್ಲಿ, ಬಾಯಿ ಮುಚ್ಕೊಂಡಿರಬೇಡಿ ಎನ್ನುವ ಹಾಗೆ ಅಭಿಮಾನಿಗಳನ್ನು ಪ್ರಚೋದಿಸಿದರು.
ಮ್ಯಾಕ್ಸ್‌ವೆಲ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಬೌಂಡರಿ ಲೈನ್‌ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ್ದರು. ಅತ್ತ ಕ್ಯಾಚ್ ಹಿಡಿದ ಬೆನ್ನಲ್ಲೇ ಕೊಹ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಮುಖಮಾಡಿ, ಆರ್‌ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಕೊಂಡಿರಬೇಡಿ ಎಂಬಂತೆ ಸನ್ನೆ ಮಾಡಿದ್ದರು.
ಇದೇ ವಿಷಯವಾಗಿ ಇಬ್ಬರು ಆಟಗಾರರಿಗೆ ಮಾತಿನ ಚಕಮಕಿ ನಡೆದಿರುವ ಸಾಧ್ಯತೆಯಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಗ್ವಾದ ನಡೆದಾಗ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರನ್ನು ಸಮಾಧಾನಪಡಿಸಲು ಎರಡೂ ತಂಡಗಳ ಆಟಗಾರರು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಾಯಕ ಕೆಎಲ್ ರಾಹುಲ್ ಮಧ್ಯಪ್ರವೇಶಿಸಿ ಗಂಭೀರ್ ಅವರನ್ನು ತಡೆದಿದ್ದಾರೆ.
ಬಳಿಕ ಆಕ್ಷರ್ ಪಟೇಲ್ ಕೂಡ ಗಂಭೀರ್‌ನನ್ನು ಸಮಾಧಾನಪಡಿಸಿದ್ದಾರೆ. ಕೊಹ್ಲಿ ಅವರನ್ನು ಆರ್‌ಸಿಬಿ ಆಟಗಾರರು ಸಮಾಧಾನಪಡಿಸಿ ಕರೆದುಕೊಂಡು ಹೋದರು.