- ‘ಕೊಹ್ಲಿ ಶತಕ ಸಿಡಿಸಬಹುದು ಎಂದು ಊಹಿಸಿದ್ದೆ, ಆದರೆ ಹೃದಯ ಒಡೆಯಿತು” ಎಂದ ಪಾಕ್ ಯುವತಿ
- “ಪಾಕಿಸ್ತಾನದ ಬಗ್ಗೆ ಭಾರತದವ ಈ ರೀತಿ ಹೇಳಿದ್ದಿದ್ದರೆ, ಈಗ ದೇಶದ್ರೋಹಿಯಾಗಿರುತ್ತಿದ್ದ” ಎಂದ ನೆಟ್ಟಿಗ
ನಿನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಶ್ರೀಲಂಕಾದ ಪಲ್ಲೆಕೆಲೆ ಮೈದಾನಕ್ಕೆ ಬಂದಿದ್ದ ವಿರಾಟ್ ಕೊಹ್ಲಿಯ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಅಭಿಮಾನಿಯೋವರು, ಸದ್ಯ ನೆಟ್ಟಿಗರ ಮನಗೆದ್ದಿದ್ದು, ಸುದ್ದಿಯಾಗಿದ್ದಾರೆ.
ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಅಭಿಮಾನಿಯೊಬ್ಬಳು, ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನವನ್ನು ಅನಾವರಣ ಮಾಡಿದ್ದು, ಆಕೆ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
ನಿನ್ನೆ ಮಳೆಬಾಧಿತ ಪಂದ್ಯದಲ್ಲಿ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಬಹುದು ಎನ್ನುವ ಆಸೆಯಲ್ಲಿ ಲಂಕಾಗೆ ಬಂದಿಳಿದಿದ್ದ ಯುವತಿ, ಆದರೆ ವಿರಾಟ್ ಕೊಹ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದು ಆಕೆಯ ಕನಸು ನುಚ್ಚುನೂರಾಗುವಂತೆ ಮಾಡಿದೆ.
ಪಂದ್ಯ ರದ್ದಾದ ಬಳಿಕ ಮಾಧ್ಯಮವೊಂದಕ್ಕೆ ಮಾತನಾಡುತ್ತಿದ್ದ ಆಕೆ, “ನಾನು ವಿರಾಟ್ ಕೊಹ್ಲಿ ಆಟವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಯಾಕೆಂದರೆ ನಾನು ಅವರ ದೊಡ್ಡ ಅಭಿಮಾನಿ. ನಾನು ಅವರು ಶತಕ ಸಿಡಿಸಬಹುದು ಎಂದು ಬಯಸಿದ್ದೇ, ಆದರೆ ನನ್ನ ಹೃದಯ ಒಡೆದು ಹೋಯಿತು” ಎಂದು ಹೇಳಿದ್ದಾಳೆ.
ಇನ್ನು ಇದೇ ವೇಳೆ, “ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಹಾಗೂ ಭಾರತವನ್ನೂ ಬೆಂಬಲಿಸುತ್ತೇನೆ” ಎಂದು ಹೇಳಿದಾಗ ಆಕೆಯ ಬಲಬದಿಯಲ್ಲಿದ್ದ ವ್ಯಕ್ತಿ ಮಧ್ಯಪ್ರವೇಶಿಸಿದಾಗ, “ಚಾಚಾ, ನೆರೆಹೊರೆಯವರನ್ನು ಪ್ರೀತಿಸುವುದರಲ್ಲಿ ತಪ್ಪೇನು ಇಲ್ಲ ಅಲ್ವಾ?” ಎಂದಿದ್ದಾರೆ.
ಬಳಿಕ, “ಒಂದು ವೇಳೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪಾಕಿಸ್ತಾನದ ಮಹಿಳಾ ಅಭಿಮಾನಿ “ವಿರಾಟ್ ಕೊಹ್ಲಿ” ಎಂದು ಹೇಳಿಕೆ ನೀಡಿದ್ದು, ಸಾಕಷ್ಟು ವೈರಲ್ ಆಗಿದೆ.
ಈ ಯುವತಿ, ಒಂದು ಕೆನ್ನೆಯ ಮೇಲೆ ಪಾಕಿಸ್ತಾನ ಹಾಗೂ ಇನ್ನೊಂದು ಕೆನ್ನೆಯ ಬದಿಯಲ್ಲಿ ಭಾರತದ ಧ್ವಜವನ್ನು ಚಿತ್ರಿಸಿಕೊಂಡು ಮೈದಾನಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದನ್ನೂ ಇದೇ ವೇಳೆ ತೋರಿಸುವ ಮೂಲಕ ಪಂದ್ಯಾಕೂಟದ ಹೆಸರಿನಲ್ಲಿ ದ್ವೇಷ ಹರಡುವವರಿಗೆ ಮಾದರಿಯಾಗಿದ್ದಾಳೆ.
ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಏಳು ಎಸೆತಗಳನ್ನು ಎದುರಿಸಿ ಕೇವಲ 4 ರನ್ ಗಳಿಸಿದ್ದ ವೇಳೆ, ಶಾಹೀನ್ ಶಾ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ದರು.
ಈಕೆಯ ವಿಡಿಯೋ ವೈರಲಾದ ಬಳಿಕ, ಹಲವು ಮಂದಿ ನೆಟ್ಟಿಗರು ಆಕೆಯ ಮಾತುಗಳಿಗೆ ಫಿದಾ ಆಗಿದ್ದಾರೆ.
“ಒಂದು ವೇಳೆ ಭಾರತದ ಅಭಿಮಾನಿ ಪಾಕಿಸ್ತಾನದ ಬಗ್ಗೆ ಈ ರೀತಿಯಾಗಿ ಮುಕ್ತವಾಗಿ ಹೇಳಿದ್ದಿದ್ದರೆ ಆತ ಈಗ ದೇಶದ್ರೋಹಿಯಾಗಿರುತ್ತಿದ್ದ” ಎಂದ ನೆಟ್ಟಿಗರೋರ್ವರು ವಿಡಿಯೋ ಹಂಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.