ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ ಅತ್ಯಂತ ಮಹತ್ವ ಪಡೆದಿರುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ, ಜೂನ್ 16ರಂದು ಆರಂಭವಾಗಿರುವ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಕುತೂಹಲಕಾರಿ ಘಟ್ಟ ತಲುಪಿದೆ. ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು ಪಂದ್ಯ ಗೆಲ್ಲಲು ಕಮ್ಮಿನ್ಸ್ ಪಡೆ 174 ರನ್ ಗಳಿಸಬೇಕಾಗಿದೆ. ಮತ್ತೊಂದೆಡೆ ಆತಿಥೇಯ ಇಂಗ್ಲೆಂಡ್ ಗೆಲುವಿಗೆ 7 ವಿಕೆಟ್‌ಗಳ ಅಗತ್ಯವಿದೆ.
ಟೆಸ್ಟ್ ಕ್ರಿಕೆಟ್ ಪ್ರಿಯರ ಗಮನ ಸೆಳೆದಿರುವ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ತಂಡದ ʻಬ್ರಂಬ್ರೆಲ್ಲಾʼ ಫೀಲ್ಡಿಂಗ್ ತಂತ್ರಗಾರಿಕೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ವಿಕೆಟ್ ಪಡೆಯಲು, ಅನುಸರಿಸಿದ ವಿನೂತನ ತಂತ್ರದಿಂದ ಇಂಗ್ಲೆಂಡ್ ತಂಡ ಹಾಗೂ ನಾಯಕ ಬೆನ್ ಸ್ಟ್ರೋಕ್ಸ್ ಭಾರಿ ಸುದ್ದಿಯಾಗಿದ್ದಾರೆ.
ಆರಂಭಿಕನಾಗಿ ಬಂದು 320 ಎಸೆತಗಳನ್ನು ಎದುರಿಸಿ 141 ರನ್‌ಗಳಿಸಿ ಆಡುತ್ತಿದ್ದ ಖ್ವಾಜಾ ವಿಕೆಟ್ ಪಡೆಯುವುದು ಆಂಗ್ಲನ್ ಬೌಲಿಂಗ್ ಪಡೆಗೆ ದೊಡ್ಡ ಸವಾಲಾಗಿತ್ತು. ರಾಬಿನ್ಸನ್ ಎಸೆದ ಇನ್ನಿಂಗ್ಸ್‌ನ 113ನೇ ಓವರ್‌ನ ಮೂರನೇ ಎಸೆತಕ್ಕೂ ಮುನ್ನ, ನಾಯಕ ಸ್ಟೋಕ್ಸ್ ಕ್ಷೇತ್ರರಕ್ಷಣೆಯಲ್ಲಿ ʻಬ್ರಂಬ್ರೆಲ್ಲಾʼ ಬದಲಾವಣೆ ಮಾಡಿದರು.
ಪಿಚ್‌ನ ಎರಡೂ ಬದಿಗಳ 30 ಗಜಗಳ ಅಂತರದಲ್ಲಿ ತಲಾ ಮೂವರು ಕ್ಷೇತ್ರ ರಕ್ಷಕರನ್ನು ಕ್ಯಾಚಿಂಗ್ ಸ್ಥಾನದಲ್ಲಿ ನಿಲ್ಲಿಸಿದ ಸ್ಟೋಕ್ಸ್, ಉಸ್ಮಾನ್ ಖ್ವಾಜಾಗೆ ʻದಿಗ್ಬಂಧನʼ ವಿಧಿಸಿದರು. ಕವರ್ ಕ್ಷೇತ್ರದಲ್ಲಿ ಓಲ್ಲಿ ಪೋಪ್, ಹ್ಯಾರಿ ಬ್ರೂಕ್ ಜೇಮ್ಸ್ ಆಂಡರ್ಸನ್ ಮತ್ತು ಆಫ್ ಸೈಡ್‌ನಲ್ಲಿ ಕ್ಯಾಚಿಂಗ್ ಮಿಡ್-ವಿಕೆಟ್ ಕ್ಷೇತ್ರದಲ್ಲಿ ಜೋ ರೂಟ್, ಸ್ಟುವರ್ಟ್ ಬ್ರಾಡ್ ಮತ್ತು ಖುದ್ದು ಸ್ಟೋಕ್ಸ್ ʻತಡೆಗೋಡೆʼ ಎಂಬಂತೆ ನಿಂತರು.
ಸ್ಟೋಕ್ಸ್ ಫೀಲ್ಡಿಂಗ್ ತಂತ್ರಗಾರಿಕೆ ಸ್ಟ್ರೈಕ್‌ನಲ್ಲಿದ್ದ ಶ್ವಾಜಾರನ್ನು ವಿಚಲಿತಗೊಳಿಸಿತ್ತು. ರೌಂಡ್‌ದ ವಿಕೆಟ್ ಆಗಿ ರಾಬಿನ್ಸನ್ ಎಸೆದ ಮುಂದಿನ ಚೆಂಡನ್ನು ಕ್ರೀಸ್‌ನಿಂದ ಮುನ್ನುಗ್ಗಿ ಬಾರಿಸಲು ಉಸ್ಮಾನ್ ಯತ್ನಿಸಿದರು. ಆದರೆ ಯಾರ್ಕರ್ ಎಸೆತ ಖ್ವಾಜಾರ ಬ್ಯಾಟ್ ಅನ್ನು ವಂಚಿಸಿ ನೇರವಾಗಿ ನೇರವಾಗಿ ವಿಕೆಟ್‌ಗೆ ಬಡಿಯಿತು. ಇಂಗ್ಲೆಂಡ್ ನಾಯಕ ಅನುಸರಿಸಿದ ತಂತ್ರ ಫಲ ನೀಡಿದ ಪರಿಣಾಮ ಶತಕವೀರ ಉಸ್ಮಾನ್ ಖ್ವಾಜಾ ಪೆವಿಲಿಯನ್‌ಗೆ ಮರಳಬೇಕಾಯಿತು.
ಈ ವೇಳೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ʻನೀವು ಎಂದಾದರೂ ಇಂತಹ ಫೀಲ್ಡಂಗ್ ರಚನೆಯನ್ನು ನೋಡಿದ್ದೀರಾʼ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.
ಏನಿದು ʻಬ್ರಂಬ್ರೆಲ್ಲಾʼ ಫೀಲ್ಡಿಂಗ್ ವಿಧಾನ?
ಬ್ಯಾಟರ್ ಮೇಲೆ ಒತ್ತಡ ಹೇರಲು, ಪಿಚ್‌ನ ಆಫ್‌ಸೈಡ್ ಮತ್ತು ಲೆಗ್‌ಸೈಡ್‌ಗಳ 30 ಗಜಗಳ ಅಂತರದಲ್ಲಿ ಕ್ಯಾಚಿಂಗ್ ಸ್ಥಾನದಲ್ಲಿ ಅರ್ಧ ಚಂದ್ರಾಕೃತಿ ಅಥವಾ ಬಿಡಿಸಿದ ಕೊಡೆಯ ಆಕಾರದಲ್ಲಿ ಕ್ಷೇತ್ರ ರಕ್ಷಕರನ್ನು ನಿಯೋಜಿಸುವುದೇ ʻಬ್ರಂಬ್ರೆಲ್ಲಾʼ ಫೀಲ್ಡಿಂಗ್ ವಿಧಾನ.
1981 ರಿಂದ 2001ರ ಅವಧಿಯಲ್ಲಿ ಎಡ್ಜ್‌ಬಾಸ್ಟನ್‌ನ ಬರ್ಮಿಂಗ್‌ಹ್ಯಾಂ ಮೈದಾನದಲ್ಲಿ ಬಳಸುತ್ತಿದ್ದ ʻಬ್ರಂಬ್ರೆಲ್ಲಾʼ (ದೊಡ್ಡ ಪಿಚ್ ಹೊದಿಕೆ) ಹೆಸರನ್ನು ಈ ಫೀಲ್ಡಿಂಗ್ ತಂತ್ರಕ್ಕೆ ಇಡಲಾಗಿದೆ.