ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 20ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ನೀಡಿದ್ದ 400 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಕೇವಲ 170 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ, 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಲು ಹೊರಟ ಹಾಲಿ ಚಾಂಪಿಯನ್ನರು, 22 ಓವರ್ಗಳಾಗುವಷ್ಟರಲ್ಲಿ 170 ರನ್ಗಳನ್ನಷ್ಟೇ ಕಲೆ ಹಾಕಿತು. ಆ ಮೂಲಕ 229 ರನ್ಗಳಿಂದ ಸೋಲು ಕಂಡಿದೆ. ಗಾಯಾಳು ಬೌಲರ್ ಕ್ರಿಸ್ ಟೋಪ್ಲಿ ಬ್ಯಾಟಿಂಗ್ ನಡೆಸಲಿಲ್ಲ.
ದಕ್ಷಿಣ ಆಫ್ರಿಕಾದ ಬಿಗು ಬೌಲಿಂಗ್ಗೆ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ತಂಡ, ಆರಂಭದಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ ಈ ಹೀನಾಯ ಸೋಲು ಕಂಡಿದೆ.
ಇಂಗ್ಲೆಂಡ್ ಪರ ಬೈರ್ ಸ್ಟೋ 10, ಹ್ಯಾರಿ ಬ್ರೂಕ್ 17, ಜೋಸ್ ಬಟ್ಲರ್ 15 ರನ್ ಗಳಿಸಿದರು. ಕ್ರೀಸ್ಗೆ ಬಂದ ಬಳಿಕ ಬಟ್ಲರ್ ಕೇವಲ 7 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ಅಬ್ಬರಿಸಲು ಯತ್ನಿಸಿದರು. ಆದರೆ ಬಂದಷ್ಟೇ ವೇಗದಲ್ಲಿ ಜೆರಾಲ್ಡ್ ಕೊಯೆಟ್ಝೀ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ಗೆ ಕ್ಯಾಚಿತ್ತು ಪೆವಿಲಿಯನ್ಗೆ ತೆರಳಿದರು. ಕೇವಲ 100 ರನ್ ಗಳಿಸುವಷ್ಟರಲ್ಲೇ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡಿತ್ತು.
ಕೊನೆಯಲ್ಲಿ ಬೌಲರ್ಗಳಾದ ಮಾರ್ಕ್ ವುಡ್ ಹಾಗೂ ಅಟ್ಕಿನ್ಸನ್ ಭರ್ಜರಿ ಹೊಡೆತಗಳ ಮೂಲಕ 69 ರನ್ಗಳ ಜೊತೆಯಾಟ ನಡೆಸಿದರು. ಮಾರ್ಕ್ ವುಡ್ 17 ಎಸೆತಗಳಲ್ಲಿ 43 ರನ್(5 ಸಿಕ್ಸ್, 2 ಬೌಂಡರಿ) ಗಳಿಸಿ ಅಜೇಯರಾಗುಳಿದರೆ, ಅಟ್ಕಿನ್ಸನ್ 21 ಎಸೆತಗಳಲ್ಲಿ 35 ರನ್(7 ಬೌಂಡರಿ) ಬಾರಿಸಿ, ಕೇಶವ್ ಮಹಾರಾಜ್ ಎಸೆತದಲ್ಲಿ ಬೌಲ್ಡ್ ಆದರು.
Fifty partnership between Wood and Atkinson from 27 balls – England’s tail is swinging hard! 💥#ENGvSA #CWC23
— ESPNcricinfo (@ESPNcricinfo) October 21, 2023
ಈ ಸೋಲಿನ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಆಡಿರುವ 4 ಪಂದ್ಯದಲ್ಲಿ ಕೇವಲ 1 ಜಯ ಗಳಿಸಿದ್ದು, ಮೂರು ಸೋಲಿನೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಾರಿದೆ.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಬೌಲಿಂಗ್ನಲ್ಲಿ ಜಾನ್ಸೆನ್ 2, ಜೆರಾಲ್ಡ್ ಕೊಯೆಟ್ಝೀ 3, ಲುಂಗಿ ಎನ್ಗಿಡಿ 2, ರಬಾಡ ಹಾಗೂ ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಗಳಿಸಿದರು.
ಬೃಹತ್ ಮೊತ್ತದ ಪೇರಿಸಿದ್ದ ಸೌತ್ ಆಫ್ರಿಕಾ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಪರವಾಗಿ 67 ಎಸೆತಗಳನ್ನು ಎದುರಿಸಿದ ಹೆನ್ರಿಕ್ ಕ್ಲಾಸೆನ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 107 ರನ್ ಬಾರಿಸಿ ಔಟಾದರು.
ಕೊನೆಯಲ್ಲಿ ಮಾರ್ಕೊ ಯಾನ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಯಾನ್ಸೆನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು.