ಒಬ್ಬ ಆದರ್ಶ ಕ್ರಿಕೆಟಿಗ ಹೇಗಿರಬೇಕು ಎಂಬುದಕ್ಕೆ ಹಲವಾರು ಮಾಜಿ ಆಟಗಾರರು ಮತ್ತು ಕ್ರಿಕೆಟ್ ಪಂಡಿತರು ಕೇನ್ ವಿಲಿಯಮ್ಸನ್ ಅವರನ್ನು ಮಾನದಂಡವಾಗಿ ಪರಿಗಣಿಸಿದ್ದಾರೆ. ಅವರನ್ನು ನೋಡಿದರೆ, ಮನುಷ್ಯ ನಿಜವಾಗಿ ಇಷ್ಟು ಒಳ್ಳೆಯವನಾಗಿರುವುದು ಸಾಧ್ಯವೆ ಎಂದು ಒಮ್ಮೊಮ್ಮೆ ಅಚ್ಚರಿಯಾಗುವುದುಂಟು. ಕ್ರಿಕೆಟ್ ಜಗತ್ತಿನ ಅತ್ಯಂತ ಸಜ್ಜನನಾದ ಈತನನ್ನು ‘ಬ್ಯಾಟ್‌ನೊಂದಿಗೆ ಧ್ಯಾನ ಮಾಡುವ ಸನ್ಯಾಸಿ’ ಎಂದು ಮಾಧ್ಯಮವೊಂದು ಬಣ್ಣಿಸಿತ್ತು.
2019ರ ವಿಶ್ವಕಪ್ ಫೈನಲ್ ಪಂದ್ಯ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 15 ರನ್ ಬೇಕಿತ್ತು. ಓವರ್‌ನ ಮೂರನೇ ಎಸೆತದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ಸಿಕ್ಸರ್ ಬಾರಿಸಿದ್ದರು. ಇನ್ನು ಮೂರು ಎಸೆತಗಳಲ್ಲಿ ಅವರಿಗೆ 9 ರನ್ ಬೇಕಿತ್ತು. ಈ ವೇಳೆ ಡೀಪ್ ಕವರ್‌ನಲ್ಲಿ ಸ್ಟೋಕ್ಸ್ ಚೆಂಡನ್ನು ಬಾರಿಸಿದರು. ಕ್ರೀಸ್‌ನಲ್ಲಿದ್ದ ಬ್ಯಾಟ್ಸ್‌ಮನ್‌ಗಳು ಎರಡು ರನ್ ತೆಗೆದುಕೊಳ್ಳುವಾಗ ಫೀಲ್ಡರ್ ಮಾರ್ಟಿನ್ ಗಪ್ಟಿಲ್ ಮಾಡಿದ ಥ್ರೋ ಸ್ಟೋಕ್ಸ್ ಬ್ಯಾಟ್‌ಗೆ ಬಡಿದು ಬೌಂಡರಿ ಗೆರೆ ದಾಟಿತ್ತು. ಅದಕ್ಕೆ ಅಂಪೈರ್ ಧರ್ಮಸೇನಾ ಇಂಗ್ಲೆಂಡ್‌ಗೆ ಆರು ರನ್ ನೀಡಿದ್ದು ವಿಶ್ವದಾದ್ಯಂತ ಚರ್ಚಗೆ ಗ್ರಾಸವಾಗಿತ್ತು. ಅಂಪೈರ್ ವಾಸ್ತವವಾಗಿ ಆರು ರನ್ ಬದಲಿಗೆ ಐದು ರನ್ ನೀಡಬೇಕಿತ್ತು ಎಂದು ಕ್ರಿಕೆಟ್ ತಜ್ಞರು ಹೇಳಿದ್ದರು. ಒಂದು ರನ್ ಕೂಡ ನಿರ್ಣಾಯಕವಾಗಿತ್ತು. ನ್ಯೂಜಿಲೆಂಡ್ ಒಮ್ಮೆಯೂ ವಿಶ್ವಕಪ್ ಗೆಲ್ಲದಿರುವ ತಂಡ. ಅಂಥ ತಂಡ ವಿಶ್ವಕಪ್ ಎತ್ತಿಹಿಡಿಯುವ ಗಳಿಗೆ ಸನ್ನಿಹಿತವಾಗಿತ್ತು. ಆದರೆ, ಆ ಒಂದು ಓವರ್ ಥ್ರೋ ನ್ಯೂಜಿಲೆಂಡ್ ಕೈಗೆ ಬಂದಿದ್ದ ವಿಶ್ವಕಪ್ ಅನ್ನು ಇಂಗ್ಲೆಂಡ್ ಕೈಗಿಟ್ಟಿತು. ನ್ಯೂಜಿಲೆಂಡ್ ಕೆಟ್ಟ ಅಂಪೈರಿಂಗ್‌ಗೆ ಬಲಿಯಾಗಿತ್ತು.
ಆದರೆ, ಅದರ ಬಗ್ಗೆ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ ಒಂದು ಮಾತೂ ಆಡಲಿಲ್ಲ. ವಿಲಿಯಮ್ಸನ್ ತಮ್ಮ ಸೋಲಿಗೆ ಅಂಪೈರ್ ಅನ್ನಾಗಲಿ, ಐಸಿಸಿ ನಿಯಮಗಳನ್ನಾಗಲಿ ದೂಷಿಸಲು ನಿರಾಕರಿಸಿದರು. ಅವರು ಕಪ್ ಗೆದ್ದವರಿಗೆ ಗೌರವವನ್ನು ನೀಡಿದರು. “ಇಂಗ್ಲೆಂಡ್ ಉತ್ತಮ ತಂಡ. ಅವರು ಗೆಲುವಿಗೆ ಅರ್ಹರು ಎಂದು ನಾವು ಭಾವಿಸುತ್ತೇವೆ” ಎಂದಿದ್ದರು. ನಂತರ ಕೇನ್ ಕ್ಷಮಾ ಗುಣದ ಬಗ್ಗೆ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್, ತಾನು ಕೇನ್ ವಿಲಿಯಮ್ಸನ್‌ರನ್ನು ಜೀವನ ಪರ್ಯಂತ ಕ್ಷಮೆ ಯಾಚಿಸುತ್ತೇನೆ ಎಂದಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಅದೊಂದು ಸ್ಮರಣೀಯ ಘಟನೆಯಾಗಿ ಉಳಿಯಿತು. ಅದನ್ನು ಒಮ್ಮೆ ಸ್ಮರಿಸಿದ್ದ ರವಿಶಾಸ್ತ್ರಿ, ಕೇನ್‌ನ ಘನತೆ ಮತ್ತು ಸಮತೋಲನವನ್ನು ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಆಟಗಾರರು ಕಲಿಯಬೇಕು ಎಂದಿದ್ದರು.
ಈಗ 2023ರ ವಿಶ್ವಕಪ್ ವಿಚಾರಕ್ಕೆ ಬರೋಣ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತದ ಎದುರಾಳಿಯಾಗಿತ್ತು. ಬೃಹತ್ ಮೊತ್ತ ಪೇರಿಸಿದ್ದ ಭಾರತಕ್ಕೆ ದಿಟ್ಟ ಉತ್ತರ ನೀಡಿದ್ದ ನ್ಯೂಜಿಲೆಂಡ್, ವೀರೋಚಿತ ಸೋಲು ಕಂಡಿತ್ತು. ಪಂದ್ಯದ ನಂತರ ಪಿಚ್ ಬಗ್ಗೆ ಆರೋಪಗಳು ಬಂದವು. ಕೊನೆ ಗಳಿಗೆಯಲ್ಲಿ ಭಾರತಕ್ಕೆ ಅನುಕೂಲವಾಗುವಂತೆ ಪಿಚ್ ಬದಲಿಸಲಾಗಿದೆ ಎನ್ನುವ ಆರೋಪ ಅದು. ಬೇರೆಲ್ಲರಿಗಿಂತ ಆ ಆರೋಪಕ್ಕೆ ಮೊದಲು ಪ್ರತಿಕ್ರಿಯಿಸಿದವರು ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್. ಪಿಚ್‌ನಲ್ಲಿ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ. ಎರಡೂ ತಂಡಗಳಿಗೆ ಅನುಕೂಲಕರವಾಗಿಯೇ ಪಿಚ್ ಕಾರ್ಯನಿರ್ವಹಿಸಿದೆ ಎಂದಿದ್ದರು ವಿಲಿಯಮ್ಸನ್.
ಇನ್ನೊಂದು ಘಟನೆ; ಶ್ರೀಲಂಕಾದ ಆಲ್‌ರೌಂಡರ್ ಏಂಜಲೋ ಮ್ಯಾಥ್ಯೂಸ್, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಟೈಮ್ಡ್ ಔಟ್ ಆಗಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಅಂಥ ಮೊದಲ ಪ್ರಕರಣ ಅದು. ಅವತ್ತು ಹೆಲ್ಮೆಟ್ ಚೆಕ್ ಮಾಡಿಕೊಳ್ಳದೇ ಕ್ರೀಸಿಗಿಳಿದಿದ್ದು ಮ್ಯಾಥ್ಯೂಸ್ ಮಾಡಿದ ತಪ್ಪು ಟೈಮ್ಡ್ ಔಟ್‌ಗೆ ಕಾರಣವಾಗಿತ್ತು. ಅದರ ನಂತರದ ಪಂದ್ಯದಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ಆಡುತ್ತಿತ್ತು. ಬ್ಯಾಟ್ ಮಾಡಲು ಮ್ಯಾಥ್ಯೂಸ್ ಕ್ರೀಸಿಗೆ ಬಂದರು. ಫೀಲ್ಡಿಂಗ್ ಮಾಡುತ್ತಿದ್ದ ಕೇನ್ ವಿಲಿಯಮ್ಸನ್ ಮ್ಯಾಥ್ಯೂಸ್ ಹತ್ತಿರಕ್ಕೆ ಬಂದು, ‘ಇವತ್ತಾದ್ರೂ ಹೆಲ್ಮೆಟ್ ಸರಿಯಾಗಿ ಚೆಕ್ ಮಾಡ್ಕೊಂಡು ಬಂದಿದ್ದಿಯೋ ಇಲ್ವೋ’ ಎಂದು ಛೇಡಿಸಿದ್ದರು. ಮ್ಯಾಥ್ಯೂಸ್, ಕೇನ್ ಚಟಾಕಿಗೆ ನಾಚಿ, ನಸು ನಕ್ಕರು.
ಈ ಘಟನೆಗಳು ಕೇನ್ ವಿಲಿಯಮ್ಸನ್ ವ್ಯಕ್ತಿತ್ವಕ್ಕೆ ಒಂದು ಸಣ್ಣ ಕನ್ನಡಿ ಮಾತ್ರ. ಕೇನ್ ಅವರ ಕ್ರಿಕೆಟ್ ಜೀವನದುದ್ದಕ್ಕೂ ಇಂಥ ನೂರಾರು ಘಟನೆಗಳು ಸಿಗುತ್ತವೆ. ತಾಳ್ಮೆ, ಸಮತೋಲನದ ನಡವಳಿಕೆ, ತುಂಟತನ, ನ್ಯಾಯ ಪ್ರಜ್ಞೆ ಮುಂತಾದ, ಕ್ರಿಕೆಟಿಗರ ನಡುವೆ ಅಪರೂಪವಾಗಿರುವಂಥ ಮೌಲ್ಯಗಳು ಮೇಳೈಸಿರುವ ಆಟಗಾರ ಕೇನ್ ವಿಲಿಯಮ್ಸನ್.
ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಪಟ್ಟಿ ಮಾಡಿದರೆ, ಕೇನ್ ಅವರಲ್ಲೊಬ್ಬನಾಗಿರುತ್ತಾರೆ. ಅವರು ಆಟಗಾರನಾಗಿ ನಿರ್ಣಾಯಕ ಸಂದರ್ಭಗಳಲ್ಲಿ ಎಂದೂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡವರಲ್ಲ. ಅವರೊಬ್ಬರೇ ಪಂದ್ಯ ಗೆಲ್ಲಿಸುತ್ತಾರೆಂದಲ್ಲ; ಆದರೆ, ತಂಡಕ್ಕೆ ಉತ್ತಮ ಕೊಡುಗೆ ನೀಡುವುದನ್ನು ತಪ್ಪಿಸುವುದಿಲ್ಲ; ತಂಡಕ್ಕೆ ಅಗತ್ಯವಿದ್ದ ಬಹುತೇಕ ಸಂದರ್ಭಗಳಲ್ಲಿ ದೊಡ್ಡ ಮೊತ್ತವನ್ನೇ ಸ್ಕೋರ್ ಮಾಡಿದ್ದಾರೆ. ಭಾರತದ ವಿರುದ್ಧ ಮೊನ್ನಿನ ಸೆಮಿಫೈನಲ್‌ನಲ್ಲೂ ಕೇನ್ ಕ್ರೀಸಿನಲ್ಲಿರುವವರೆಗೆ ಭಾರತಕ್ಕೆ ಜಯ ದಕ್ಕಲಾರದು ಎಂದೇ ಬಹುತೇಕರು ಭಾವಿಸಿದ್ದರು. ಅವರ ವಿಕೆಟ್ ಬಿದ್ದ ನಂತರವೇ ಭಾರತೀಯರ ಗೆಲುವಿನ ಆಸೆ ಮತ್ತೆ ಗರಿಗೆದರಿದ್ದು.
ನ್ಯೂಜಿಲ್ಯಾಂಡ್ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೇನ್ ವಿಲಿಯಮ್ಸನ್. ಅವರ ಅಚಲ ಆತ್ಮವಿಶ್ವಾಸ ಮತ್ತು ಆಟದ ವೈಖರಿ ಅಪಾರ ಕ್ರೀಡಾಭಿಮಾನಿಗಳನ್ನು ಗಳಿಸಿಕೊಟ್ಟಿದೆ. ತನ್ನ ವೃತ್ತಿಜೀವನದಲ್ಲಿ ಕೇನ್ ಅನೇಕ ಒತ್ತಡ ಸ್ಥಿತಿಗಳನ್ನು ಅನುಭವಿಸಿದವರು. ತನ್ನ ತಂಡವನ್ನು ಹಲವು ಕಷ್ಟದ ಸಂದರ್ಭಗಳಿಂದ ಪಾರು ಮಾಡಿದವರು. ಎಂಥದ್ದೇ ಸ್ಥಿತಿಯಲ್ಲೂ ತನ್ನ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳದವರು. ಹಾಗಾಗಿಯೇ ಅವರನ್ನು ಮಿಸ್ಟರ್ ಕೂಲ್ ಕ್ಯಾಪ್ಟನ್ ಎಂದೇ ಕ್ರೀಡಾಭಿಮಾನಿಗಳು ಕರೆಯುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ಕೊಂಚ ಮಟ್ಟಿಗೆ ಈ ಗುಣಗಳನ್ನು ಅಳವಡಿಸಿಕೊಂಡ ಮತ್ತೊಬ್ಬ ಆಟಗಾರನೆಂದರೆ, ಅದು ಮಹೇಂದ್ರ ಸಿಂಗ್ ದೋನಿ. 2011ರಲ್ಲಿ ತನ್ನ ನಾಯಕತ್ವದಲ್ಲಿ ಭಾರತ ವರ್ಲ್ಡ್ ಕಪ್ ಗೆದ್ದಾಗಲೂ ಧೋನಿ ಇತರರಂತೆ ಹುಚ್ಚಾಟ ಆಡಲಿಲ್ಲ. 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ರನ್ ಔಟ್ ಆದಾಗ ಮಾತ್ರ ಕೊಂಚ ಭಾವೋದ್ವೇಗಕ್ಕೆ ಒಳಗಾದಂತೆ ಕಂಡಿದ್ದರು.
ಆಟವನ್ನು ನೋಡುವವರಿಗೆ ತಮ್ಮ ಆಟ ಆಡುವ ರೀತಿಯ ಜೊತೆಗೆ ನಡವಳಿಕೆಯೂ ಮಾದರಿಯಾಗಿರಬೇಕು ಎಂದು ನಂಬಿದವರು ವಿಲಿಯಮ್ಸನ್. ನಾವು ಕ್ರಿಕೆಟ್‌ನ ರಾಯಭಾರಿಗಳು ಎನ್ನುವುದು ನೆನಪಿಟ್ಟುಕೊಳ್ಳಬೇಕು ಎಂದು ಅವರು ಹೇಳುತ್ತಿರುತ್ತಾರೆ. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ತಮ್ಮ ನಡವಳಿಕೆ ಮುಖ್ಯ ಎನ್ನುವುದು ಅವರ ನಂಬಿಕೆ.
ಆಕ್ರಮಣಶೀಲತೆ ಮತ್ತು ಜೋರು ವರ್ತನೆಯನ್ನು ಕ್ರೀಡೆಯಲ್ಲಿ ಒಂದು ಮಾದರಿ ಎಂದು ಪರಿಗಣಿಸುವವರೇ ಹೆಚ್ಚಾಗಿರುವ ಕಾಲಮಾನ ಇದು. ಶಾಂತವಾಗಿರುವುದು ಎಂದರೆ, ಬಹುತೇಕ ನಿಷ್ಕ್ರಿಯತೆ ಎಂದೇ ಎಲ್ಲರೂ ಭಾವಿಸಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ಕ್ಯಾಪ್ಟನ್ ಬ್ರೆಂಡೆನ್ ಮೆಕಲಮ್ ಕೂಡ ಹಾಗೆ ಆಕ್ರಮಣಕಾರಿಯಾಗಿದ್ದವರೇ, ಅವರು ಗೆಲುವಿಗಾಗಿ ಮುನ್ನುಗ್ಗುವ ಗುಣದವರು. ಗೆಲ್ಲಲು ಹತಾಶರಂತೆ ವರ್ತಿಸುವುದನ್ನು ಇಂದು ಸಹಜ ಎನ್ನುವಂತೆ ಸ್ವೀಕರಿಸಲಾಗಿದೆ. ಆದರೆ, ಕೇನ್ ಅದಕ್ಕೆ ವಿರುದ್ಧ. ಮನಸ್ಸಿನ ಶಾಂತಿ ಮತ್ತು ಆಳದ ನೆಮ್ಮದಿ ಮಾತ್ರ ನಿಮಗೆ ಯಶಸ್ಸು ಮತ್ತು ಸಂತಸ ತರಬಲ್ಲವು ಎನ್ನುವುದು ಈತನ ವಿಶ್ವಾಸ. ಇದರಿಂದಾಗಿಯೇ ಕೇನ್ ಇವತ್ತು ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಕ್ರಿಕೆಟರ್; ಅತಿ ಹೆಚ್ಚು ಯುವಕರನ್ನು ಪ್ರಭಾವಿಸಿರುವ ಆಟಗಾರನೂ ಹೌದು. ಒಬ್ಬ ಆದರ್ಶ ಕ್ರಿಕೆಟಿಗ ಹೇಗಿರಬೇಕು ಎಂಬುದಕ್ಕೆ ಹಲವಾರು ಮಾಜಿ ಆಟಗಾರರು ಮತ್ತು ಕ್ರಿಕೆಟ್ ಪಂಡಿತರು ವಿಲಿಯಮ್ಸನ್ ಅವರನ್ನು ಮಾನದಂಡವಾಗಿ ಪರಿಗಣಿಸಿದ್ದಾರೆ. ಅವರನ್ನು ನೋಡಿದರೆ, ಮನುಷ್ಯ ನಿಜವಾಗಿ ಇಷ್ಟು ಒಳ್ಳೆಯವನಾಗಿರುವುದು ಸಾಧ್ಯವೆ ಎಂದು ಒಮ್ಮೊಮ್ಮೆ ಅಚ್ಚರಿಯಾಗುವುದುಂಟು. ಕ್ರಿಕೆಟ್ ಜಗತ್ತಿನ ಅತ್ಯಂತ ಸಜ್ಜನನಾದ ಅವರನ್ನು ‘ಬ್ಯಾಟ್‌ನೊಂದಿಗೆ ಧ್ಯಾನ ಮಾಡುವ ಸನ್ಯಾಸಿ’ ಎಂದು ಮಾಧ್ಯಮವೊಂದು ಬಣ್ಣಿಸಿತ್ತು. ಅವರನ್ನು ಕ್ರಿಕೆಟ್ ಲೋಕದ ಕ್ರಿಸ್ತ, ಕಿರೀಟವಿಲ್ಲದ ರಾಜ ಎಂದೂ ಬಣ್ಣಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ: ವಿರಾಟ್, ಅಯ್ಯರ್ ಹೆಸರು ಉಲ್ಲೇಖಿಸಿ ಶಮಿ ಹೆಸರು ಕಡೆಗಣಿಸಿದ ಪ್ರಲ್ಹಾದ್ ಜೋಶಿ; ಭಾರೀ ವಿರೋಧ
ನ್ಯೂಜಿಲೆಂಡ್ ಕ್ರಿಕೆಟಗರಿಗೆ ಭಾರತೀಯ ಆಟಗಾರರಿಗೆ ಸಿಕ್ಕಷ್ಟು ಸಂಭಾವನೆ ಸಿಗುವುದಿಲ್ಲ. ಆದರೂ ತನ್ನ ದುಡಿಮೆಯ ಒಂದು ಪಾಲನ್ನು ಕೇನ್ ಅಗತ್ಯವಿರುವವರಿಗೆ, ಅಸಹಾಯಕರಿಗೆ ಖರ್ಚು ಮಾಡುತ್ತಾರೆ. ಹಿಂದೊಮ್ಮೆ ಪೇಶಾವರ ಶಾಲೆಯ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಟೂರ್ನಿಯೊಂದರ ತನ್ನ ಸಂಭಾವನೆಯನ್ನು ಬಿಟ್ಟುಕೊಟ್ಟಿದ್ದರು. ನ್ಯೂಜಿಲೆಂಡ್ ತಂಡವು ಕೂಡ ಕೇನ್ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದೆ.
ಆಸ್ಟ್ರೇಲಿಯಾ ಐದು ಬಾರಿ ವಿಶ್ವಕಪ್ ಗೆದ್ದಿರಬಹುದು. ಆದರೆ, ಆಟಗಾರರು ಎಂದರೆ ಹೇಗಿರಬೇಕು ಎನ್ನುವುದಕ್ಕೆ ಇವತ್ತಿಗೂ ಮಾದರಿಯಾಗಿರುವುದು ಅವರ ಕಿರಿಯ ಸಹೋದರರಂತಿರುವ ನ್ಯೂಜಿಲ್ಯಾಂಡ್ ತಂಡದವರು. ಯಾವುದೇ ಅಹಂಕಾರವನ್ನು ಹೊಂದಿರದ ನ್ಯೂಜಿಲೆಂಡ್ ತಂಡವು ಒಂದು ತೆರೆದ ಪುಸ್ತಕದಂತಿದೆ ಎಂದರೆ, ಅದಕ್ಕೆ ಕಾರಣ ಕೇನ್ ವಿಲಿಯಮ್ಸನ್. ಕೇನ್ ವಿಲಿಯಮ್ಸನ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ. ಆದರೆ, ವಿಶ್ವದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ.
ಪ್ರೀತಿಯ ಶ್ರೀನಾಥ್, ನೀವು ಹೇಳಿದ್ದು ಅಕ್ಷರಶಃ ಸತ್ಯ. ನಾ ಕಂಡಂತೆ ಈ ಮೊದಲು ವೆಸ್ಟ್ಇಂಡೀಸ್ನ ವಿವಿಯನ್ ರಿಚರ್ಡ್ಸ್ ಹೀಗಿದ್ದರು. ನಂತರ M S ಧೋನಿ. ಹಾಗೂ ಸಂಜು ಸಮ್ಸನ್ ರವರು ಕೇನ್ ವಿಲಿಯಮ್ಸ್ ಅವರನ್ನೇ ಹೋಲುತ್ತಾರೆ.