ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಕರಗ ಮಹೋತ್ಸವ ತಿಗಳರಪೇಟೆಯಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಈ ಬಾರಿ ಏಪ್ರಿಲ್ 15ರಿಂದ 25ರವರೆಗೆ ನಡೆಯಲಿದೆ.
ಏಪ್ರಿಲ್ 25ರವರೆಗೆ ನಡೆಯುವ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರನ್ನು ಆಕರ್ಷಿಸಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ.
ಪ್ರತಿದಿನ ಪೂಜಾ ಕೈಂಕರ್ಯ
ಏಪ್ರಿಲ್ 15ರಂದು ಧ್ವಜಾರೋಹಣದೊಂದಿಗೆ ಕರಗ ಪ್ರಾರಂಭವಾಗಲಿದೆ. ನಿತ್ಯ ಬೆಳಗ್ಗೆ ಹಾಗೂ ರಾತ್ರಿ ಪೂಜೆಗಳು ನಡೆಯಲಿದೆ. ಏ.20 ರಂದು ಹೆಣ್ಣುಮಕ್ಕಳಿಂದ ಆರತಿ ದೀಪ ಹೊತ್ತು ತರುವ ಕಾರ್ಯಕ್ರಮವಿದೆ. ಏ.21 ರಂದು ಹಸಿ ಕರಗ ಮಹೋತ್ಸವ, ಏ.22 ಕ್ಕೆ ಪೊಂಗಲ್ ಸೇವೆ, ಏ.23ರಂದು ಚೈತ್ರ ಪೂರ್ಣಿಮೆಯ ದಿನವಾದ್ದರಿಂದ ಮುಖ್ಯ ಕರಗ ಮಹೋತ್ಸವ ನಡೆಯಲಿದೆ. ಏ.24ಕ್ಕೆ ಗಾವು ಹಾಗೂ ಏ.25ರಂದು ಧ್ವಜ ಅವರೋಹಣದೊಂದಿಗೆ ಕರಗ ಮಹೋತ್ಸವ ಮುಕ್ತಾಯವಾಗಲಿದೆ.
“ಕರಗಕ್ಕೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಸದ್ಯ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಯ ನಡುವೆ ಮಹೋತ್ಸವ ನಡೆಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ, ಹೆಚ್ಚುವರಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಮತ್ತು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಚಿಕ್ಕ ವಾಟರ್ ಫಿಲ್ಟರ್ ಜತೆಗೆ ದೊಡ್ಡ ಫಿಲ್ಟರ್ಗಳ ವ್ಯವಸ್ಥೆಯೂ ಇರಲಿದೆ” ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಕೆ; ಎಲ್ಲರ ಹೃದಯ ಲಬ್-ಡಬ್ ಎಂದರೆ, ಕೃತಕ ಹೃದಯ ‘ಮಶಿನ್ ಶಬ್ದ’ ಮಾಡುತ್ತೆ
ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ದ್ರೌಪದಿಯನ್ನು ವಹ್ನಿಕುಲ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ. ಶತಮಾನಗಳ ಇತಿಹಾಸವನ್ನೇ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ.