ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ. ದೇಶದಲ್ಲಿ ನಡೆದ ಎರಡನೇ ಹಂತದ ಚುನಾವಣೆ ಇದಾಗಿದೆ. ಮೊದಲ ಹಂತದ ಮತದಾನದಲ್ಲಿ 247 ಅಭ್ಯರ್ಥಿಗಳ ಭವಿಷ್ಯಕ್ಕೆ 69.23% ರಷ್ಟು ಮುದ್ರೆಯೊತ್ತಿ ಮತ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಇದು 2019ರಲ್ಲಿ ದಾಖಲಾದ 68.96% ಕ್ಕಿಂತ ಮತ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಬೆಂಗಳೂರಿನ ನಾಗರಿಕರು ಎಂದಿನಂತೆ ಈ ಬಾರಿ ಮತದಾನದಲ್ಲಿ ತಮ್ಮ ನಿರಾಸಕ್ತಿಯ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ.
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಕ್ರಮವಾಗಿ 54.42%, 52.81% ಹಾಗೂ 53.15% ಮತದಾನವಾಗಿದೆ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ವರ್ಷ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಮತದಾನ ಶೇಕಡಾವಾರು ಪ್ರಮಾಣ ಸುಧಾರಣೆಯಾಗಿದೆ. ಆದರೆ, ವ್ಯಾಪಕ ಪ್ರಚಾರ, ಜನ ಜಾಗೃತಿ ಇರುವ ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ.
ಬೆಂಗಳೂರು ಉತ್ತರದಲ್ಲಿ 54.42% ಮತದಾನವಾಗಿದೆ. 2019ರಲ್ಲಿ 54.76% ಕ್ಕಿಂತ ಸ್ವಲ್ಪ ಕಡಿಮೆ (0.34%) ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ -1.51% ರಿಂದ 53.81% ಕ್ಕೆ ಕುಸಿದರೆ, ಬೆಂಗಳೂರು ದಕ್ಷಿಣ 53.15% ರಷ್ಟು ಮತದಾನವಾಗಿದೆ.
ರಾಜರಾಜೇಶ್ವರಿನಗರ ಮತ್ತು ಬೆಂಗಳೂರು ದಕ್ಷಿಣದ ಎರಡು ನಗರ ವಿಧಾನಸಭಾ ಕ್ಷೇತ್ರಗಳು ಕಳಪೆ ಪ್ರದರ್ಶನ ನೀಡಿದ್ದು, ಸುಮಾರು 55% ಮತದಾನವಾಗಿದೆ. ಆನೇಕಲ್‌ನಲ್ಲಿ ಶೇ.60ರಷ್ಟು ಮತದಾನವಾಗಿದ್ದರೆ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಶೇ.80ರಷ್ಟು ಮತದಾನವಾಗಿದೆ.
ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಬೆಂಗಳೂರು ಉತ್ತರದಲ್ಲಿ 32.14 ಲಕ್ಷ ಮತದಾರರಿದ್ದು, ಬೆಂಗಳೂರು ಸೆಂಟ್ರಲ್‌ನಲ್ಲಿ 24.33 ಲಕ್ಷ ಮತ್ತು ಬೆಂಗಳೂರು ದಕ್ಷಿಣದಲ್ಲಿ 23.41 ಲಕ್ಷ ಮತದಾರರು ಇದ್ದಾರೆ. ಮತದಾರರು ಕಾಯುವ ಸಮಯವನ್ನು ಕಡಿಮೆ ಮಾಡಲು ಚುನಾವಣಾ ಆಯೋಗವು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಿತ್ತು.
ಇದಲ್ಲದೆ, ಹಿಂದಿನ ಚುನಾವಣೆಯಲ್ಲಿ ಮತದಾನದ ಮಾದರಿಯನ್ನು ಅಧ್ಯಯನ ಮಾಡಿದ ಅಧಿಕಾರಿಗಳು ಮತದಾರರ ಭಾಗವಹಿಸುವಿಕೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಬೆಂಗಳೂರಿನ ಕ್ಷೇತ್ರಗಳಿಗೆ ವಿಶೇಷ ಮತದಾರರ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದರು. ಆದರೆ, ಮತದಾನದ ದಿನದ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರಲಿಲ್ಲ. ಓಕಳಿಪುರಂನ 61 ವರ್ಷದ ಮತದಾರರಾದ ಗಂಗಾಧರಪ್ಪ ಅವರು ಮತ ಚಲಾಯಿಸಲು ಯಾವುದೇ ಕಾರಣವಿಲ್ಲ ಎಂದು ನಿರಾಸಕ್ತಿ ತೋರಿದರು.
The second phase also records drop in turnout, about 6% points compared to the same constituencies in 2019 (info till 11.30 pm).
By tomorrow it may settle to around 4% drop, as in the first phase. Looks like a national trend. pic.twitter.com/xbRmjaslq8— Yogendra Yadav (@_YogendraYadav) April 26, 2024
ಹಿಂದಿನ ಮೂರು ಚುನಾವಣೆಗಳಲ್ಲಿ (2018 ಅಸೆಂಬ್ಲಿ, 2019 ಲೋಕಸಭೆ ಹಾಗೂ 2023 ಅಸೆಂಬ್ಲಿ) 53% ಕ್ಕಿಂತ ಕಡಿಮೆ ಮತದಾನವನ್ನು ದಾಖಲಿಸಿದ ಬೆಂಗಳೂರು ದಕ್ಷಿಣವು ತನ್ನ ಮತದಾನದ ಶೇಕಡಾವಾರು ಪ್ರಮಾಣವನ್ನು 53.15% ನಲ್ಲಿ ಕಾಯ್ದುಕೊಂಡಿದೆ. ಬೆಂಗಳೂರು ಸೆಂಟ್ರಲ್ ಮತದಾನದಲ್ಲಿ 2019 ರಲ್ಲಿ 54.32% ರಿಂದ ಈ ಬಾರಿ 52.81% ಕ್ಕೆ ಕುಸಿದಿದೆ.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವಾರು ತಂತ್ರಗಳನ್ನು ಅಳವಡಿಸಿಕೊಂಡಿದ್ದರೂ, ನಗರದ ಮತದಾರರು ಯಾವಾಗಲೂ ಮತದಾನದ ಬಗ್ಗೆ ಉತ್ಸಾಹ ತೋರದಿರುವುದು ವಿಷಾದನೀಯ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರದ 28 ಲಕ್ಷ ಮತದಾರರ ಪೈಕಿ 67.29% ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2019ರ ಸಂಖ್ಯೆಗಿಂತ 2.31% ರಷ್ಟು ಸುಧಾರಣೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ಹೃದ್ರೋಗ ತಜ್ಞ ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ಮಂಡ್ಯದಲ್ಲಿ 81.48% ಮತದಾನ
ಮಂಡ್ಯದಲ್ಲಿ ಅತಿ ಹೆಚ್ಚು ಅಂದರೆ, 81.48% ಮತದಾನವಾಗಿದೆ. ಮತದಾನದಲ್ಲಿ ಮಂಡ್ಯ ನಂತರ ಕೋಲಾರದಲ್ಲಿ 78.07%, ದಕ್ಷಿಣ ಕನ್ನಡದಲ್ಲಿ 77.43% ಮತದಾನವಾಗಿದೆ. ಉಡುಪಿಯಲ್ಲಿ 76.06%, ತುಮಕೂರಿನಲ್ಲಿ 77.7%, ಹಾಸನದಲ್ಲಿ 77.51%, ದಕ್ಷಿಣ ಕನ್ನಡದಲ್ಲಿ 77.43% ಹಾಗೂ ಚಿಕ್ಕಬಳ್ಳಾಪುರದಲ್ಲಿ 76.82% ಮತದಾನವಾಗಿದೆ. ಏಳು ಕ್ಷೇತ್ರಗಳಲ್ಲಿ ಶೇ.75ಕ್ಕಿಂತ ಹೆಚ್ಚಿನ ಮತದಾನವಾಗಿದ್ದರೆ, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮಾತ್ರ ಶೇ.60ಕ್ಕಿಂತ ಕಡಿಮೆ ಮತದಾನವಾಗಿದೆ. ಮೈಸೂರಿನಲ್ಲಿ 70.45% ಮತದಾನವಾಗಿದೆ.
ಎಲ್ಲ ಮತಗಟ್ಟೆಗಳಿಂದ ಅಂತಿಮ ವರದಿಗಳನ್ನು ಪಡೆದ ನಂತರ ಮತದಾನದ ಶೇಕಡಾವಾರು ಬದಲಾಗುವ ಸಾಧ್ಯತೆಯಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಚಾಮರಾಜನಗರ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಹಿನ್ನೆಲೆ ಘರ್ಷಣೆ ಉಂಟಾಯಿತು. ಹಾಸನದ ವಡ್ಡರಪಾಳ್ಯದಲ್ಲಿ ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆಸ್ ಬೆಂಬಲಿಗರು ಘರ್ಷಣೆ ಮಾಡಿದ ಕೆಲವು ಘಟನೆಗಳನ್ನು ಹೊರತುಪಡಿಸಿ, ರಾಜ್ಯದಲ್ಲಿ ಮತದಾನ ಬಹುತೇಕ ಭಾಗ ಶಾಂತಿಯುತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವು 80.59% ಮತದಾನವನ್ನು ದಾಖಲಿಸಿದ್ದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದು 84.75 ರಷ್ಟು ಮತದಾನವಾಗಿತ್ತು.