ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಜನರು ರೋಸಿ ಹೋಗಿದ್ದಾರೆ. ಕೆಜಿಗೆ 20 ರೂಪಾಯಿ ಇದ್ದ ತರಕಾರಿಗಳು ಈಗ ಕೆಜಿಗೆ 80 ರೂಪಾಯಿಗೆ ಸಿಗುತ್ತಿವೆ.
ಮಳೆಯಿಲ್ಲದೇ, ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಈ ಹಿನ್ನೆಲೆ, ಮಾರುಕಟ್ಟೆಗೆ ತರಕಾರಿಗಳು ಬರುತ್ತಿಲ್ಲ. ಹೀಗಾಗಿ, ತರಕಾರಿಗಳ ಬೆಲೆ ಗಗನಕ್ಕೇರಿದೆ.
ಸದ್ಯ, ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗುತ್ತಿದೆ. ಹೀಗಾಗಿ, ಮಾರುಕಟ್ಟೆಗೆ ಕಡಿಮೆ ಪ್ರಮಾಣದ ತರಕಾರಿ ಬರುತ್ತಿದ್ದು, ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ, ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಇನ್ನು ಮಾರುಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ತರಕಾರಿಗಳ ದರ ಏರಿಕೆಯಾಗಿದೆ. ಆದರೆ, ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್ಗಗಳಲ್ಲಿ ತರಕಾರಿ ಬೆಲೆ ವಿಪರೀತ ಏರಿಕೆಯಾಗಿದೆ.
ಇಂದಿನ ತರಕಾರಿ ಬೆಲೆ
ಬಟಾಣಿ:140-180, ಬೆಂಡೆಕಾಯಿ:60-66, ಟೊಮೆಟೋ:30-60, ಆಲೂಗೆಡ್ಡೆ:30-56, ಹಾಗಲಕಾಯಿ:60- 82, ಗೋರಿಕಾಯಿ:50-89, ಹಸಿ ಮೆಣಸಿನಕಾಯಿ:80-106, ಬಿಟ್ರೋಟ್: 40-46, ಈರುಳ್ಳಿ:20-39, ಕ್ಯಾರೇಟ್: 80-82, ಬೀನ್ಸ್:220-220, ನವಿಲುಕೋಸು:60-102, ಬದನೆಕಾಯಿ:60-70, ದಪ್ಪ ಮೆಣಸಿನಕಾಯಿ:40- 65, ಸೋರೆಕಾಯಿ:40-50, ಬೆಳ್ಳುಳ್ಳಿ: 300-338, ಶುಂಠಿ:180-195, ಪಡುವಲಕಾಯಿ: 30-60 ರೂಪಾಯಿ ಇದೆ.
ವಿಜಯನಗರ ಸೇರಿದಂತೆ ನಗರದ ವಿವಿಧೆಡೆ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ಬರೋಬ್ಬರಿ ₹100 ಮಾರಾಟವಾಗುತ್ತಿದೆ. ಇನ್ನು ಕಳೆದ ವಾರ ಬೀನ್ಸ್ ಬೆಲೆ ಬರೋಬ್ಬರಿ ₹200 ಇತ್ತು. ಇದೀಗ ₹220 ಆಗಿದೆ. ಸೌತೆಕಾಯಿ ಹಾಗೂ ಲಿಂಬೆಹಣ್ಣಿನ ಬೆಲೆ ಕೂಡ ಜಾಸ್ತಿಯಾಗಿದೆ. ಬೀನ್ಸ್ ಬಟಾಣಿ ಬೆಲೆ ಗ್ರಾಹಕರ ಕೈ ತಪ್ಪಿ ಹೋಗಿದ್ದು, ಬೆಲೆ ಕೇಳಿದ ಗ್ರಾಹಕರು ಖಾಲಿ ಚೀಲ ಹಿಡಿದುಕೊಂಡು ವಾಪಸ್ ಮನೆಗೆ ಹೋಗುವಂತಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರಿಗೆ ತರಕಾರಿ ಖರೀದಿ ಕಷ್ಟವಾಗಿದೆ. ಬೇಡಿಕೆಗೆ ತಕ್ಕಂತ ತರಕಾರಿ ಇಲ್ಲದೇ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು
ದರ ಏರಿಕೆಯಾದ ಹಿನ್ನೆಲೆ, ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೆಜಿ ಖರೀದಿ ಮಾಡುತ್ತಿದ್ದ ಜನರು ಅರ್ಧ ಕೆಜಿ ಖರೀದಿ ಮಾಡುತ್ತಾರೆ. ಇದರಿಂದ ವ್ಯಾಪಾರ ಕುಂಠಿತವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.