ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ 24ರಂದು ಮಧ್ಯಾಹ್ನ ಪ್ರಕಟವಾಗಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಪರೀಕ್ಷೆ ಬರೆದ 1,03,799 ಅಭ್ಯರ್ಥಿಗಳ ಪೈಕಿ 35,124 ಮಂದಿ ಕರ್ನಾಟಕದವರಾಗಿದ್ದಾರೆ. ಅಲ್ಲದೇ, ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. 68,675 ಇತರ ರಾಜ್ಯಗಳ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಾಮೆಡ್ ಕೆ ಅಂಡರ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆ 2024 ಫಲಿತಾಂಶವನ್ನು ಕಾಮೆಡ್ ಕೆನ ಅಧಿಕೃತ ವೆಬ್‌ಸೈಟ್ comedk.org ನಲ್ಲಿ ಪರಿಶೀಲನೆ ಮಾಡಬಹುದು.
ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಆರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು.
ಮೇ 12ರಂದು ಕಾಮೆಡ್ ಕೆ ಯುಜಿಇಟಿ 2024 ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷದ ಫಲಿತಾಂಶದ ಅಂಕಿಅಂಶಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ 96,607 ಅಭ್ಯರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, 77,232 ಮಂದಿ ಹಾಜರಾಗಿದ್ದರು. ಅಂತಿಮ ಉತ್ತರದ ಕೀಗಳನ್ನು ಮೇ 21ರಂದು ಬಿಡುಗಡೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಭುದ್ಯಾ ಕೊಲೆ ಪ್ರಕರಣ; 2 ಸಾವಿರಕ್ಕಾಗಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಅಪ್ರಾಪ್ತ
ಕಾಮೆಡ್ ಕೆ ಸ್ಕೋರ್‌ಕಾರ್ಡ್ ಹೆಸರು ಜತೆಗೆ ಅರ್ಜಿ ಅಥವಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪರೀಕ್ಷಾ ಪ್ರವೇಶ ಟಿಕೆಟ್ ಸಂಖ್ಯೆ, ವರ್ಗ, ಆಯ್ದ ಕೋರ್ಸ್, ಫೋಟೋ ಐಡಿ, ಇತರ ವಿವರಗಳು, ಪಡೆದ ಸ್ಕೋರ್ ಮತ್ತು ಪಡೆದ ಶ್ರೇಣಿಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು ಎಂದು ಹೇಳಿದೆ.