ಲೋಕಸಭಾ ಚುನಾವಣೆಯಲ್ಲಿ 12 ನಾನಾ ಇಲಾಖೆಗಳ ಅಗತ್ಯ ಸೇವೆಗಳ ಗೈರು ಮತದಾರರಿಗೆ(ಎವಿಇಎಸ್) ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ದ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆಯಾ ಇಲಾಖೆಗಳಿಂದ ಪಟ್ಟಿ ನೀಡಲು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣಾ ಆಯೋಗವು 12 ವಿವಿಧ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದ್ದು, ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತ ಚಾಯಿಸಲು ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದರು.
ಇಲಾಖಾವಾರು ಅಗತ್ಯ ಸೇವೆಗಳ ಗೈರು ಮತದಾರರ ಅರ್ಹ ಮತದಾರರ ಪಟ್ಟಿ ನೀಡಿದ ನಂತರ 12ಡಿ ನಮೂನೆಗಳಲ್ಲಿ ಭರ್ತಿ ಮಾಡಿ, ಮಾರ್ಚ್ 22ರ ಶುಕ್ರವಾರದೊಳಗಾಗಿ ಸಲ್ಲಿಸಲು ಸೂಚಿಸಲಾಯಿತು.
“ಅರ್ಹ ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಸೆಂಟರ್(ಪಿವಿಸಿ) ನಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನ ಮಾಡಲು ಅವಕಾಶವಿದೆ. ಅಂಚೆ ಮೂಲಕ ಅಂಚೆ ಮತದಾನ ಪತ್ರವನ್ನು ನೀಡುವ/ತಲುಪಿಸುವ ವ್ಯವಸ್ಥೆ ಈ ಬಾರಿ ಇರುವುದಿಲ್ಲ” ಎಂದು ಹೇಳಿದರು.
ವಿದ್ಯುತ್ ಇಲಾಖೆ, ಬಿ.ಎಸ್.ಎನ್.ಎಲ್ ಇಲಾಖೆ, ರೈಲ್ವೆ ಇಲಾಖೆ, ದೂರದರ್ಶನ ಇಲಾಖೆ, ಆಲ್ ಇಂಡಿಯಾ ರೇಡಿಯೋ ಇಲಾಖೆ, ಆರೋಗ್ಯ ಇಲಾಖೆ, ವಾಯುಯಾನ ಇಲಾಖೆ, ಬಸ್ ಸೇವೆಗಳು(ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ), ಅಗ್ನಿಶಾಮಕ ಸೇವೆಗಳ ಇಲಾಖೆ, ಭಾರತ ಚುನಾವಣಾ ಆಯೋಗದಿಂದ ಮತದಾನದ ದಿನಂದಂದು ಚುನಾವಣಾ ಕವರೇಜ್‌ಗಾಗಿ ಅಧಿಕೃತಗೊಂಡ ಮಾಧ್ಯಮ ವ್ಯಕ್ತಿಗಳು, ಸಂಚಾರ ಪೊಲೀಸ್ ಇಲಾಖೆ ಹಾಗೂ ಆಂಬ್ಯುಲೆನ್ಸ್ ಅಗತ್ಯ ಸೇವೆಯ 12 ಇಲಾಖೆಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸ್ ದೌರ್ಜನ್ಯ | ಪರಿಹಾರ ನೀಡಿದ ಸರ್ಕಾರದ ನಡೆಗೆ ಸ್ವಾಗತ ಎಂದ ಪಿಯುಸಿಎಲ್
ಸಭೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್, ಪೋಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿಯಾದ ಪಲ್ಲವಿ, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್, 12 ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.